
Bhatkal: ಮೀನುಗಾರಿಕಾ ದೋಣಿ ಮುಳುಗಡೆ; ನಾಲ್ವರು ಮೀನುಗಾರರು ನಾಪತ್ತೆ (video)
30/07/2025
ಮೀನುಗಾರಿಕೆಗೆ ತೆರಳಿದ ದೋಣಿಯೊಂದು ಮಗುಚಿ ಬಿದ್ದು ನಾಲ್ಕು ಮಂದಿ ಮೀನುಗಾರರು ನಾಪತ್ತೆಯಾಗಿರುವ ಘಟನೆ ಜುಲೈ 30ರಂದು ಉತ್ತರಕನ್ನಡ ಜಿಲ್ಲೆಯ ತೆಂಗಿನ ಗುಂಡಿ ಬಳಿ ನಡೆದಿದೆ.
ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಹಾಸತಿ ಗಿಲ್ ನೆಟ್ ಮಿಷಿನ್ ದೋಣಿಯಲ್ಲಿ ಅಳ್ವೆ ಕೋಡಿಯಿಂದ 6 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದ ಅಲೆಗಳಿಗೆ ಸಿಲುಕಿ ದೋಣಿಯು ತೆಂಗಿನ ಗುಂಡಿ ಸಮೀಪ ಸಮುದ್ರದಲ್ಲಿ ಮುಳುಗಡೆ ಆಗಿದೆ. ಘಟನೆಯಲ್ಲಿ ಇಬ್ಬರನ್ನು ರಕ್ಷಿಸಿ ಭಟ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ನಾಲ್ಕು ಜನ ಮೀನುಗಾರರು ನಾಪತ್ತೆಯಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದ ಮೀನುಗಾರರನ್ನು ಬೆಳ್ಳಿ ಬಂದರು ನಿವಾಸಿ ರಾಮ ಮಾಸ್ತಿ ಖಾರ್ವಿ ಹಾಗೂ ಭಟ್ಕಳ ಜಾಲಿ ನಿವಾಸಿ ಮನೋಹರ ಈರಯ್ಯ ಮೊಗೇರ ಎಂದು ಗುರುತಿಸಲಾಗಿದೆ. ಭಟ್ಕಳ ಕೋಡಿ ಜಾಲಿ ನಿವಾಸಿ ರಾಮಕೃಷ್ಣ, ಅಳ್ವೆಕೋಡಿ ನಿವಾಸಿ ಸತೀಶ್ ತಿಮ್ಮಪ್ಪ ಮೊಗೇರ, ಅಳ್ವೆ ಕೋಡಿ ನಿವಾಸಿ ಗಣೇಶ್ ಮಂಜುನಾಥ್ ಮೊಗೇರ, ಮುರುಡೇಶ್ವರ ನಿವಾಸಿ ನಿಶ್ಚಿತ್ ಮೊಗೇರ ನಾಪತ್ತೆಯಾಗಿದ್ದು, ಹುಡುಕಾಟ ನಡೆಸಲಾಗುತ್ತಿದೆ.