Udupi: ರೈತರ ದರ್ಖಾಸು ಜಾಗಗಳಿಗೆ ಪೋಡಿ ಮಾಡಿಸಿ: ಸಚಿವ ಕೃಷ್ಣ ಭೈರೇಗೌಡ ಸೂಚನೆ

Udupi: ರೈತರ ದರ್ಖಾಸು ಜಾಗಗಳಿಗೆ ಪೋಡಿ ಮಾಡಿಸಿ: ಸಚಿವ ಕೃಷ್ಣ ಭೈರೇಗೌಡ ಸೂಚನೆ


ರೈತರಿಗೆ ದರ್ಖಾಸುನಲ್ಲಿ ಮಂಜೂರಾದ ಭೂಮಿಗಳ ಪೋಡಿ ಮಾಡುವ ಕಾರ್ಯವನ್ನು ಮಳೆಗಾಲ ಮುಗಿದ ಕೂಡಲೇ ಪ್ರಾರಂಭಿಸಿ, 10,000 ಜನರಿಗೆ ಮಾಡಿಕೊಡಬೇಕೆಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.  

ಅವರು ಮಣಿಪಾಲದಲ್ಲಿ ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಇಲಾಖಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 


ದರ್ಖಾಸಿನಲ್ಲಿ  ಕಳೆದ 20ರಿಂದ 50 ವರ್ಷಗಳಲ್ಲಿ ಮಂಜೂರಾಗಿರುವ ಜಮೀನಿಗೆ ಪೋಡಿ ಮಾಡಿ ರೈತರಿಗೆ ಪಹಣಿ ನೀಡುವ ಕಾರ್ಯಗಳ ವಿಲೇವಾರಿ ನಿಗದಿತ ಪ್ರಮಾಣದಲ್ಲಿ ಆಗಿಲ್ಲ. ಇಲಾಖೆಯ ಕೆಳ ಹಂತದ ಗ್ರಾಮ ಲೆಕ್ಕಾಧಿಕಾರಿಗಳು, ರೆವೆನ್ಯೂ ಇನ್ ಸ್ಪೆಕ್ಟರ್ ಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರ  ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಿ ಪೋಡಿ ಮಾಡುವ ಕಾರ್ಯವನ್ನು ತ್ವತಿತಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. 


ಪೌತಿ ಖಾತೆ  ಮಾಡುವ ಕಾರ್ಯ ರಾಜ್ಯದಲ್ಲಿ ಈಗಾಗಲೇ ಆರಂಭವಾಗಿದೆ. ಜಿಲ್ಲೆಯಲ್ಲೂ ಸಹ ಆರಂಭವಾಗಿದ್ದು, ಪ್ರಗತಿ ತುಂಬಾ ಕುಂಠಿತವಾಗಿದೆ. ಈ ಕಾರ್ಯದ ವೇಗವನ್ನು ಹೆಚ್ಚಿಸಬೇಕು. ಜಿಲ್ಲೆಯಲ್ಲಿ 2,92,000 ಜಮೀನಿನ ಪೌತಿ ಖಾತೆ ಮಾಡಬೇಕಿದೆ ಎಂದ ಅವರು, ಮೃತರ ಹೆಸರಿನಲ್ಲಿ ಜಮೀನಿನ ಖಾತೆಗಳು ಇದ್ದಲ್ಲಿ ಸರಕಾರದ ಸೌಲಭ್ಯಗಳು ಹಾಗೂ ಸಬ್ಸಿಡಿಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಇವುಗಳನ್ನು ಆದ್ಯತೆಯ ಮೇಲೆ ಮಾಡಬೇಕು.ತ

 ಮುಂಗಾರು ಪೂರ್ವ ಮಳೆ ಬಂದ ಸಂದರ್ಭದಲ್ಲಿ ಸಿಡಿಲು, ಗುಡುಗಿನಿಂದ ಪ್ರತಿ ವರ್ಷ 70ಕ್ಕೂ ಹೆಚ್ಚು ಜನರು ರಾಜ್ಯದಲ್ಲಿ ಸಾವಿಗೀಡಾಗುತ್ತಿದ್ದಾರೆ. ಸಿಡಿಲು ಬಡಿಯುವಾಗ ಜನರು ಎಲ್ಲಿ ಆಶ್ರಯ ಪಡೆಯಬೇಕು ಎಂಬ ಮಾಹಿತಿ ಕೊರತೆಯಿಂದ ಈ ರೀತಿಯ ಸಾವು -ನೋವುಗಳು ಉಂಟಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಪಂಚಾಯತ್ ಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳು ಸಕ್ರಿಯವಾಗಿರಬೇಕು. ಒಂದು ವರ್ಷ ಮಾಡುವುದು ಮತ್ತೊಂದು ವರ್ಷ ಬಿಡುವುದು ಸರಿಯಲ್ಲ. ಮಳೆಗಾಲದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಅತಿವೃಷ್ಟಿ ಯಿಂದ ಮನೆಗಳು ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದಲ್ಲಿ ಅವರುಗಳಿಗೆ ಪರಿಹಾರದ ಅನುದಾನವನ್ನು ನೀಡುವುದರ ಜೊತೆಗೆ ದೇವರಾಜ ಅರಸು ವಸತಿ ಯೋಜನೆಯಡಿಯಲ್ಲಿ ಮನೆಯನ್ನು ಮಂಜೂರು ಮಾಡಬೇಕು. ಈ ರೀತಿ ಮಂಜೂರು ಮಾಡುವ ಅಧಿಕಾರ ಕಂದಾಯ ಇಲಾಖೆಗೆ ಇದೆ ಎಂದರು.  

ಮಳೆಯಿಂದ ರಸ್ತೆಗಳು ಹಾಳಾಗಿವೆ. ಜನರ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುಂಡಿ ಮುಚ್ಚುವ ಕಾರ್ಯವನ್ನು ಕೈಗೊಳ್ಳಬೇಕು. ಎನ್.ಡಿ.ಆರ್.ಎಫ್ ನಿಯಮಾವಳಿಯ ಪ್ರಕಾರ ಪ್ರಸ್ತಾವನೆಯನ್ನು ಸಲ್ಲಿಸಿದರೆ ಅನುಮೋದನೆ ನೀಡಲಾಗುವುದು. ಗುಂಡಿ ಮುಚ್ಚುವಂತಹ ಸಣ್ಣ ಪುಟ್ಟ ಕಾರ್ಯಗಳಿಗೆ ಹೆಚ್ಚು ಹೆಚ್ಚು ಅನುದಾನಬೇಕೆಂದು ಕೇಳಿದಲ್ಲಿ ಅನುಮತಿ ನೀಡುವುದು ಕಷ್ಟ. ಇವುಗಳನ್ನು ಎನ್.ಡಿ.ಆರ್.ಎಫ್ ನಿಯಮಾವಳಿಯ ಪ್ರಕಾರ ಮಾಡಿ ಜನರಿಗೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದರು. 

ಜಿಲ್ಲೆಯಲ್ಲಿ ಬಗರ್ ಹುಕುಂ ಅಡಿಯಲ್ಲಿ 687 ಜನರಿಗೆ ಹಕ್ಕುಪತ್ರಗಳನ್ನು ವಿತರಿಸುವ ಕಾರ್ಯವಾಗಬೇಕಾಗಿತ್ತು. ಆದರೆ ಇದುವರೆಗೆ ಕೇವಲ 9 ಜನರಿಗೆ ಮಾತ್ರ ವಿತರಿಸಲಾಗಿದೆ. ಆಗಸ್ಟ್ 15ರ ಒಳಗಾಗಿ  ಅರ್ಹರಿರುವ  ಪ್ರತಿಯೊಬ್ಬರಿಗೂ ಹಕ್ಕುಪತ್ರ ವಿತರಿಸುವ ಕಾರ್ಯವಾಗಬೇಕೆಂದು ಸಚಿವರು ಸೂಚಿಸಿದರು.


ಭೂ ಸುರಕ್ಷಾ ಯೋಜನೆ ಅಡಿ ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯವು ನೆರೆಯ ಜಿಲ್ಲೆಗೆ ಹೋಲಿಸಿದಲ್ಲಿ ಕಡಿಮೆ ಇದೆ. ಇಲ್ಲಸಲ್ಲದ ಸಬುಬೂ ಹೇಳುವುದು ಸರಿಯಲ್ಲ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಗ್ರಾಮ ಲೆಕ್ಕಿಗರಿಗೆ ಲ್ಯಾಪ್ ಟಾಪ್ ವಿತರಣೆಯನ್ನು ಮಾಡಲಾಗಿದೆ. ಗ್ರಾಮ ಲೆಕ್ಕಿಗರು ತಮ್ಮ ಪ್ರತಿಯೊಂದು ಕಾರ್ಯಗಳನ್ನು ಈಗಿನಿಂದಲೇ ಇ - ಆಫೀಸ್ ಮೂಲಕ ಮಾಡಬೇಕು ಎಂದರು.

 ಸಭೆಯಲ್ಲಿ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿ.ಎಫ್.ಓ ಗಣಪತಿ, ವೈಲ್ಡ್ ಲೈಫ್ ಡಿ.ಎಫ್.ಓ ಶಿವರಾಮ್ ಎಂ ಬಾಬು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

Ads on article

Advertise in articles 1

advertising articles 2

Advertise under the article