
J & K: 22 ಅನಾಥ ಮಕ್ಕಳ ದತ್ತು ಸ್ವೀಕಾರಕ್ಕೆ ರಾಹುಲ್ ಗಾಂಧಿ ನಿರ್ಧಾರ
29/07/2025
ಆಪರೇಶನ್ ಸಿಂಧೂರ್ ಸಂದರ್ಭದಲ್ಲಿ ಪಾಕಿಸ್ಥಾನವು ಜಮ್ಮು ಮತ್ತು ಕಾಶ್ಮೀರದ ಪೂಂಚ್ ಪ್ರದೇಶದಲ್ಲಿ ನಡಸಿದ ಶೆಲ್ ದಾಳಿಯಲ್ಲಿ ಪಾಲಕರನ್ನು ಕಳೆದುಕೊಂಡು ಅನಾಥರಾದ 22 ಮಕ್ಕಳನ್ನು ದತ್ತು ಸ್ವೀಕರಿಸಲು ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿರ್ದರಿಸಿದ್ದಾರೆ.
ಕಳೆದ ಜುಲೈ 24ರಂದು ರಾಹುಲ್ ಗಾಂಧಿ ಅವರು ಪೂಂಚ್ ಪ್ರದೇಶಕ್ಕೆ ತೆರಳಿ ದಾಳಿಯಿಂದ ಆಗಿರುವ ಹಾನಿಯನ್ನು ಪರಿಶೀಲಿಸಿದ್ದರು ಹಾಗೂ ನಿರಾಶ್ರಿತರ ಶಿಬಿರಗಳಿಗೂ ತೆರಳಿ ಅವರ ಸಂಕಷ್ಟಗಳನ್ನು ಆಲಿಸಿದ್ದರು. ಆ ಸಂದರ್ಭದಲ್ಲಿ ರಾಹುಲ್ ಅವರು ಅನಾಥರಾದ ಮಕ್ಕಳನ್ನು ಗುರುತಿಸುವಂತೆ ರಾಜ್ಕ ಕಾಂಗ್ರೆಸ್ ಮುಖ್ಯಸ್ಥರಿಗೆ ಸೂಚಿಸಿದ್ದರು. ಇದೀಗ ರಾಜ್ಯ ಕಾಂಗ್ರೆಸ್, ಪಾಕಿಸ್ಥಾನದ ದಾಳಿಯಲ್ಲಿ ತಂದೆ ಅಥವಾ ತಾಯಿ ಅಥವಾ ಇಬ್ಬರನ್ನೂ ಕಳೆದುಕೊಂಡ 22 ಅನಾಥರನ್ನು ಗುರುತಿಸಿ, ಜಿಲ್ಲಾಡಳಿತ ತಯಾರಿಸಿದ ಅನಾತರಾದವರ ಪಟ್ಟಿಯಲ್ಲಿಯೂ ಅವರ ಹೆಸರಿರುವುದನ್ನು ಖಚಿತಪಡಿಸಿದೆ.
ಗುರುತಿಸಲ್ಪಟ್ಟ 22 ಮಕ್ಕಳ ಶಿಕ್ಷಣದ ಸಂಪೂರ್ಣ ವೆಚ್ಚವನ್ನು ರಾಹುಲ್ ಗಾಂಧಿ ಅವರು ಭರಿಸಲಿದ್ದು, ಅವರ ಮುಂದಿನ ಜೀವನಕ್ಕೆ ಸಂಪೂರ್ಣ ಸಹಾಯ ಮಾಡಲಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ತಾರೀಖ್ ಹಮೀದ್ ಖರ್ರಾ ತಿಳಿಸಿದ್ದಾರೆ. ಈ ದತ್ತು ಸ್ವೀಕಾರ ಕಾರ್ಯಕ್ರಮ ಇದೇ ವಾರ ನಡೆಯಲಿದೆ ಎಂದು ಅವರು ತಿಳಿಸಿದರು.