
Dharmasthala: ಶವಗಳ ಹೂತಿರುವ ಪ್ರಕರಣ; 13 ಕಡೆಗಳಲ್ಲಿ ಅಗೆಯುವ ಕಾರ್ಯ ಆರಂಭ
29/07/2025
ಧರ್ಮಸ್ಥಳ ಗ್ರಾಮದ ವಿವಿಧೆಡೆ ಹಲವಾರು ಶವಗಳನ್ನು ಹೂತು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆಯನ್ನು ಮೂಂದುವರಿಸಿದ್ದು, ದೂರುದಾರ ಗುರುತಿಸಿರುವ ಸ್ಥಳಗಳನ್ನು ಅಗೆಯುವ ಪ್ರಕ್ರಿಯೆ ಆರಂಭಗೊಂಡಿದೆ.
ದೂರುದಾರನನ್ನು ಕೂಡಾ ಎಸ್ಐಟಿ ತಂಡ ಸ್ಥಳಕ್ಕೆ ಕರೆತಂದಿದೆ. ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿರುವ 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಗಳಿಗೆ ಜುಲೈ 29ರಂದು ಮತ್ತೆ ಆಗಮಿಸಿರುವ ಎಸ್ಐಟಿ, ಗುರುತು ಮಾಡಿರುವ ಸ್ಥಳಗಳನ್ನು ಅಗೆಯಲು ಕಾರ್ಮಿಕರನ್ನು ಕರೆಸಿದೆ. ಈಗಾಗಲೇ ಕಾರ್ಮಿಕರು ಹಾರೆ, ಪಿಕ್ಕಾಸು ಸಹಿತ ಸಾಮಗ್ರಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು, ಅಗೆಯುವ ಪ್ರಕ್ರಿಯೆ ಆರಂಭಿಸಿದೆ ಎಂದು ತಿಳಿದುಬಂದಿದೆ.
ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎಸಿ ಸ್ಟೆಲ್ಲಾ ವರ್ಗೀಸ್ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ.
ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯರಾದ ಡಾ. ಜಗದೀಶ್ ರಾವ್ ಮತ್ತು ಡಾ. ರಶ್ಮಿ ನೇತೃತ್ವದ ತಂಡವನ್ನು ಎಸ್.ಐ.ಟಿ ಸ್ಥಳಕ್ಕೆ ಕರೆಸಿದೆ. ಜುಲೈ 28ರಂದು ಬೆಳಗ್ಗೆ ದೂರುದಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಹೇಳಿಕೊಂಡಿರುವ 13 ಸ್ಥಳಗಳನ್ನು ಗುರುತಿಸಿದ್ದನು. ಆ ಸ್ಥಳಗಳನ್ನು ಗುರುತು ಮಾಡಿ ಸುತ್ತ ಕೆಂಪು ರಿಬ್ಬನ್ ಗಳನ್ನು ಕಟ್ಟಲಾಗಿದೆ. ಆ ಸ್ಥಳಗಳಿಗೆ ರಾತ್ರಿ ವೇಳೆ ಪೊಲೀಸ್ ಗಸ್ತು ಏರ್ಪಡಿಸಲಾಗಿತ್ತು.