Udupi: ಶ್ರೀಕೃಷ್ಣನ ತತ್ವಗಳಿಂದ ಸನ್ಮಾರ್ಗದ ಜೀವನ ಸಾಧ್ಯ- ರಾಜ್ಯಪಾಲ ಗೆಹ್ಲೋಟ್

Udupi: ಶ್ರೀಕೃಷ್ಣನ ತತ್ವಗಳಿಂದ ಸನ್ಮಾರ್ಗದ ಜೀವನ ಸಾಧ್ಯ- ರಾಜ್ಯಪಾಲ ಗೆಹ್ಲೋಟ್


ಪರಮಾತ್ಮ ಶ್ರೀಕೃಷ್ಣನ ಉಪದೇಶಗಳು ಜೀವನದಲ್ಲಿ ಕರ್ಮ, ಧರ್ಮ, ಭಕ್ತಿ, ಜ್ಞಾನ ಮತ್ತು ಸೇವೆಯನ್ನು ಸಮತೋಲನಗೊಳಿಸಲು ಮಾರ್ಗದರ್ಶಕವಾಗಿವೆ ಎಂದು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು. 

ಉಡುಪಿ ಶ್ರೀ ಕೃಷ್ಣಮಠ, ಪರ್ಯಾಯ ಶ್ರೀ ಪುತ್ತಿಗೆ ಮಠಗಳ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. "ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತಃ, ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್" ಈ ಶ್ಲೋಕವು ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಉಪದೇಶವಾಗಿದೆ. ಇದರಲ್ಲಿ ಧರ್ಮ ಸ್ಥಾಪನೆ ಮತ್ತು ದುಷ್ಟರ ನಾಶಕ್ಕಾಗಿ ದೇವರ ಅವತಾರವನ್ನು ವಿವರಿಸಲಾಗಿದೆ. ಈ ರೀತಿ ಶ್ರೀ ಕೃಷ್ಣನ ಉಪದೇಶಗಳನ್ನು ಆಳವಾಗಿ ಅರ್ಥಮಾಡಿಕೊಂಡರೆ, ಧರ್ಮ ಕಾಪಾಡುವುದರ ಜೊತೆಗೆ ಜೀವನದಲ್ಲಿ ಯಶಸ್ಸು ಗಳಿಸುವ ಮಾರ್ಗದತ್ತ ಸಾಗಬಹುದು ಎಂದು ಅಭಿಪ್ರಾಯಪಟ್ಟರು. 


"ಶ್ರೀಕೃಷ್ಣನು ಜೀವನದ ಪ್ರತಿಯೊಂದು ಅಂಶವನ್ನು ಮುಟ್ಟುತ್ತಾನೆ - ಬಾಲ್ಯ, ಯೌವನ, ರಾಜಕೀಯ, ಭಕ್ತಿ, ಜ್ಞಾನ, ಕರ್ಮ ಮತ್ತು ನಿಸ್ವಾರ್ಥ ಸೇವೆ. ಶ್ರೀ ಕೃಷ್ಣನ ಬಾಲ್ಯದ ಲೀಲೆಗಳಿಂದ ಹಿಡಿದು ಮಹಾಭಾರತ ಯುದ್ಧದವರೆಗಿನ ಜೀವನವು ಒಂದು ಆಳವಾದ ಮತ್ತು ಸ್ಪೂರ್ತಿದಾಯಕ ಪ್ರಯಾಣವನ್ನು ಚಿತ್ರಿಸುತ್ತದೆ ಮತ್ತು ನಮ್ಮನ್ನು ಮತ್ತು ಯುವಕರನ್ನು ಭಕ್ತರು, ಕರ್ತವ್ಯನಿಷ್ಠರು, ನಿರ್ಭೀತರು ಮತ್ತು ವಿವೇಕಯುತ ಕರ್ಮಯೋಗಿಗಳಾಗಲು ಪ್ರೇರೇಪಿಸುತ್ತದೆ" ಎಂದು ತಿಳಿಸಿದರು. 

"ಈ ಮಂಡಲೋತ್ಸವದ ಮೂಲಕ, ಎಲ್ಲರೂ ಶ್ರೀಕೃಷ್ಣ ಪರಮಾತ್ಮನು ತೋರಿಸಿದ ಮಾರ್ಗವನ್ನು ಅನುಸರಿಸುವ ಮೂಲಕ ಜೀವನವನ್ನು ಯಶಸ್ವಿಗೊಳಿಸಿಕೊಳ್ಳಬೇಕು ಮತ್ತು ನಡವಳಿಕೆ ಮತ್ತು ಆಲೋಚನೆಗಳಲ್ಲಿ ಸದಾಚಾರವನ್ನು ತಂದುಕೊ0ಡು ಧರ್ಮ ಮಾರ್ಗದಲ್ಲಿ ನಡೆದು ಸಮಾಜದ ಒಳಿತಿಗಾಗಿ ಶ್ರಮಿಸಬೇಕು ಎಂದು ರಾಜ್ಯಪಾಲರು ಕರೆ ನೀಡಿದರು. 


ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ವಿಶ್ವಪ್ರಿಯ ತೀರ್ಥ ಸ್ವಾಮಿಜಿ, ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥರು, ಶಾಸಕ ಯಶಪಾಲ್ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article