
Manipal: 5 ಲಕ್ಷ ರೂಪಾಯಿ ಪಡೆದು ವಂಚನೆ; ಮಹಿಳೆಯ ವಿರುದ್ಧ ಪ್ರಕರಣ ದಾಖಲು
02/08/2025
ಗೃಹ ಸಾಲ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ಮುಂಗಡ ಹಣ ಪಡೆದು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರೆ ನಿವಾಸಿ ಝೀನತ್ ವಿರುದ್ಧ ಉಡುಪಿಯ ಹೆರ್ಗ ಗ್ರಾಮದ ರಮಾದೇವಿ ಎಂಬವರು ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ. ಹೊಸ ಮನೆ ಖರೀದಿಗಾಗಿ ಹುಡುಕಾಟ ನಡೆಸುತ್ತಿದ್ದ ರಮಾದೇವಿ ಅವರಿಗೆ ಝೀನತ್ ಅವರು 2024ರ ಜನವರಿ ತಿಂಗಳಲ್ಲಿ ಉಡುಪಿಯ ಅಲೆವೂರು ವಿಷ್ಣುಮೂರ್ತಿ ದೇವಸ್ಥಾನದ ಬಳಿ 24 ಲಕ್ಷ ರೂಪಾಯಿಗೆ ಹಳೆಯ ಆರ್ಸಿಸಿ ಮನೆ ಇರುವುದಾಗಿ ತೋರಿಸಿದ್ದರು. ಅದರಂತೆ ಝೀನತ್ ಅವರು ಮುಂಗಡವಾಗಿ 5 ಲಕ್ಷ ರೂಪಾಯಿ ಪಡೆದು, ಗೃಹ ಸಾಲ ಮಾಡಿಕೊಡುವುದಾಗಿ ನಂಬಿಸಿದ್ದರು.
ಮನೆಯ ದಾಖಲೆಗಳನ್ನು ರಮಾದೇವಿಯವರ ಹೆಸರಿಗೆ ಮಾಡಿಕೊಡುವ ವೇಳೆ 5 ಲಕ್ಷ ರೂಪಾಯಿ ವಾಪಾಸು ನೀಡುವುದಾಗಿ ತಿಳಿಸಲಾಗಿತ್ತು. ಆದರೆ ಬಳಿಕ ಮನೆಯ ಮೂಲ ದಾಖಲೆಗಳನ್ನು ನೀಡದೇ, ಮುಂಗಡವಾಗಿ ನೀಡಿದ 5 ಲಕ್ಷ ಹಣವನ್ನೂ ನೀಡದೇ ಝೀನತ್ ಅವರು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.