
Udupi: ಸಂವಿಧಾನ ಬದಲಾದರೆ ದಲಿತರು, ಹಿಂದುಳಿದವರಿಗೆ ಗಂಡಾಂತರ; ಕಿಮ್ಮನೆ
03/08/2025
ಅಂಬೇಡ್ಕರ್ ಇಲ್ಲದೆ ಹೋಗಿದ್ದರೆ ಈ ದೇಶದ ದಲಿತರು ಹಾಗೂ ಹಿಂದುಳಿದ ವರ್ಗದವರು ಇಂದಿಗೂ ಮಾಲೀಕರ ಹಂಡೆಗೆ ನೀರು ತುಂಬುವ ಕೆಲಸ ಮಾಡಿಕೊಂಡಿರುತ್ತಿದ್ದರು ಎಂದು ಮಾಜಿ ಸಚಿವ ಹಾಗೂ ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಭಾನುವಾರ ಉಡುಪಿಯ ಟೌನ್ ಹಾಲ್ ನಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬಿಜೆಪಿಯ ಅಂಬೇಡ್ಕರ್ ಪ್ರೀತಿ ಬರೀ ನಾಟಕ. ಸಂವಿಧಾನ ಬದಲಿಸುವಷ್ಟು ಬಹುಮತ ಸಿಗುವವರೆಗೆ ಬಿಜೆಪಿಯವರಿಗೆ ಎಲ್ಲಾ ಜಾತಿಯವರು, ಎಲ್ಲಾ ಭಾಷೆಯವರು ಬೇಕು. ಆ ಬಳಿಕ ದೇಶದಲ್ಲಿ ಒಂದೇ ಭಾಷೆ, ಒಂದೇ ಧರ್ಮ, ಒಬ್ಬನೇ ರಾಜ ಎಂಬ ಕಾನೂನು ತಂದುಬಿಡುತ್ತಾರೆ ಎಂದರು.
ಸೈದ್ಧಾಂತಿಕ ಬದ್ಧತೆಯಿರುವ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವುದು ದೇಶದ ಸೌಭಾಗ್ಯ.
ಅದೆಷ್ಟೋ ಸುಶಿಕ್ಷಿತ ಕಾಂಗ್ರೆಸ್ ಕಾರ್ಯಕರ್ತರಿಗೆ, ಮುಖಂಡರಿಗೆ ಗಾಂಧಿ, ನೆಹರು ಹಾಗೂ ಅಂಬೇಡ್ಕರ್ ಅವರಂತಹ ನಾಯಕರ ಸಾಧನೆ, ಚರಿತ್ರೆ ಕುರಿತು ಮಾಹಿತಿ ಇಲ್ಲದಿರುವುದು ದೌರ್ಭಾಗ್ಯ ಎಂದರು.
ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರಿಶ್ ಕಿಣಿ, ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನೇಶ ಪುತ್ರನ್, ದಿವಾಕರ ಕುಂದರ್, ಕೆಪಿಸಿಸಿ ವಕ್ತಾರ ಮುನೀರ್ ಜನ್ಸಾಲೆ, ಶ್ರೀಧರ ಪಿ.ಎಸ್. ಇದ್ದರು.