
Uttar Pradesh: ಕಾಲುವೆಗೆ ಉರುಳಿದ ಬೊಲೆರೋ; 11 ಮಂದಿ ಸಾವು, ಹಲವರಿಗೆ ಗಾಯ
03/08/2025
ಬೊಲೆರೋ ಕಾರೊಂದು ಕಾಲುವೆಗೆ ಬಿದ್ದು 11 ಮಂದಿ ಸಾವನಪ್ಪಿದ ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದೆ. ಮೃತರಲ್ಲಿ 5 ಮಹಿಳೆಯರು ಮತ್ತು 6 ಪುರುಷರು ಸೇರಿದ್ದಾರೆ.
ಗೊಂಡಾದಲ್ಲಿರುವ ಪೃಥ್ವಿ ನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋಗುತ್ತಿದ್ದ ಬೊಲೆರೊ ಕಾರು ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ. 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತರು ಮೋತಿಗಂಜ್ ಪೊಲೀಸ್ ಠಾಣೆಯ ಸಿಹಗಾಂವ್ ನಿವಾಸಿಗಳು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಚಾಲಕ ಬದುಕುಳಿದಿದ್ದಾನೆ.
ಭಾರೀ ಮಳೆಯಿಂದಾಗಿ ಬೊಲೆರೊ ನಿಯಂತ್ರಣ ತಪ್ಪಿ ಗೊಂಡಾದಲ್ಲಿ ಸರಯು ಕಾಲುವೆಗೆ ಬಿದ್ದಿತು. ಗೊಂಡಾ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತದ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಅವರಿಗೆ ಸರಿಯಾದ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಇದರೊಂದಿಗೆ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಹಾರೈಸಿದ್ದಾರೆ.