
Byndoor: ಮೀನುಗಾರಿಕಾ ದೋಣಿ ಮುಳುಗಡೆ; 9 ಜನ ಮೀನುಗಾರರು ಅಪಾಯದಿಂದ ಪಾರು (video)
03/08/2025
ಬೃಹತ್ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿಯೊಂದು ಮಗುಚಿ ಬಿದ್ದ ಘಟನೆ ಬೈಂದೂರು ತಾಲೂಕಿನ ಉಪ್ಪುಂದ ಮಡಿಕಲ್ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ದೋಣಿಯಲ್ಲಿದ್ದ 9 ಮೀನುಗಾರರು ಲೈಫ್ ಜಾಕೆಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.
ಉಪ್ಪುಂದ ಮೂಲದ ಚಂದ್ರ ಖಾರ್ವಿ, ಪ್ರಮೋದ್, ಪ್ರಜ್ವಲ್, ಗೌತಮ್, ಭಾಸ್ಕರ, ಯೋಗಿರಾಜ್, ಗೋವಿಂದ, ಬಾಬು ಖಾರ್ವಿ, ದೀಪಕ್ ಅಪಾಯದಿಂದ ಪಾರಾದ ಮೀನುಗಾರರು. ಇವರೆಲ್ಲ ಬೆಳಗ್ಗೆ 11 ಗಂಟೆ ಸುಮಾರಿಗೆ ಉಪ್ಪುಂದ ಶಾರದಾ ಖಾರ್ವಿ ಎಂಬವರ ಮಾಲೀಕತ್ವದ ಶಿವಪ್ರಸಾದ್ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯು ಸಮುದ್ರದಲ್ಲಿ ಮುಳುಗಡೆ ಆಗಿದೆ. ದೋಣಿಯಲ್ಲಿದ್ದ ಎಲ್ಲ 9 ಮಂದಿ ಮೀನುಗಾರರು ಕೂಡ ನೀರಿಗೆ ಬಿದ್ದರು. ಎಲ್ಲ ಮೀನುಗಾರರು ಲೈಪ್ ಜಾಕೆಟ್ ಧರಿಸಿದ್ದರಿಂದ ಸಮುದ್ರದಲ್ಲಿ ಈಜುತ್ತಿದ್ದರು. ಕೂಡಲೇ ದಡದಲ್ಲಿದ್ದ ಇತರೆ ಮೀನುಗಾರರು ರೋಪ್ ನೀಡಿ ಅವರನ್ನು ಸುರಕ್ಷಿತವಾಗಿ ದಡ ಸೇರಿಸಿದರು. ದೋಣಿ ಮಗುಚಿದ ರಭಸಕ್ಕೆ ದೋಣಿಗೆ ಹಾನಿಯಾಗಿದ್ದಲ್ಲದೆ ಎಂಜಿನ್, ದೋಣಿಯಲ್ಲಿದ್ದ ಬಲೆ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಲಕರಣೆಗಳು ನಷ್ಟವಾಗಿದೆ.
ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿ ರಾಘವೇಂದ್ರ ದೇವಾಡಿಗ, ಈಶ್ವರ, ನಾಗೇಶ್, ಸತೀಶ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.