
New Delhi: ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದ ಸೈನಾ ನೆಹ್ವಾಲ್ ದಂಪತಿ; ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್
ಭಾರತೀಯ ಬ್ಯಾಡ್ಮಿಂಟನ್ ತಾರಾ ಜೋಡಿ ಸೈನಾ ನೆಹ್ವಾಲ್ ಹಾಗೂ ಪರುಪಲ್ಲಿ ಕಶ್ಯಪ್ ತಮ್ಮ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸೈನಾ ದಾಂಪತ್ಯದಲ್ಲಿ ಬಿರುಕು ಮೂಡಿ ಇತ್ತೀಚೆಗಷ್ಟೇ ಡಿವೋರ್ಸ್ ಪಡೆಯುವುದಾಗಿ ಸುದ್ದಿಯಾಗಿತ್ತು.
ತಮ್ಮ ಬೇರ್ಪಡುವಿಕೆ ನಿರ್ಧಾರವನ್ನು ಘೋಷಿಸಿದ ಹತ್ತೊಂಬತ್ತು ದಿನಗಳ ನಂತರ, ಸೈನಾ ನೆಹ್ವಾಲ್ ತಮ್ಮ ನಿರ್ಧಾರ ಬದಲಿಸಿರುವುದಾಗಿ ಹೇಳಿದ್ದಾರೆ. ಜುಲೈ 14ರಂದು ಈ ಜೋಡಿ ಪರಸ್ಪರ ಇಬ್ಬರೂ ಡಿವೋರ್ಸ್ ನೀಡಲು ಮುಂದಾಗಿರುವ ಬಗ್ಗೆ ಹೇಳಿಕೆ ನೀಡಿದ್ದರು. ಅಲ್ಲದೆ ಈ ಬಗ್ಗೆ ಗೌಪ್ಯತೆಯನ್ನು ಕೋರಿದ್ದರು. ಈಗ ಇದ್ದಕ್ಕಿದ್ದಂತೆ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಸೈನಾ ನೆಹ್ವಾಲ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಂನಲ್ಲಿ ತಾನು ಮತ್ತು ಪರುಪಳ್ಳಿ ಕಶ್ಯಪ್ "ಮತ್ತೆ ಒಂದಾಗಲು ಪ್ರಯತ್ನಿಸುತ್ತಿದ್ದೇವೆ" ಎಂದು ಪೋಸ್ಟ್ ಮಾಡಿದ್ದಾರೆ. ಕೆಲವೊಮ್ಮೆ ದೂರವು ನಿಮಗೆ ವ್ಯಕ್ತಿಯ ಉಪಸ್ಥಿತಿಯ ಮೌಲ್ಯವನ್ನು ಕಲಿಸುತ್ತದೆ. ಇಲ್ಲಿ ನಾವು ಮತ್ತೆ ಒಂದಾಗಲು ಪ್ರಯತ್ನಿಸುತ್ತಿದ್ದೇವೆ ಎಂದು ಸೈನಾ ಬರೆದುಕೊಂಡಿದ್ದಾರೆ. ಜೊತೆಗೆ ದಂಪತಿಯ ಫೋಟೋ ಹಂಚಿಕೊಂಡು, ಟ್ಯಾಗ್ ಕೂಡ ಮಾಡಿದ್ದಾರೆ. ಈ ಮೂಲಕ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿದಿರುವ ಸಂದೇಶ ರವಾನಿಸಿದ್ದಾರೆ.
ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಒಟ್ಟಿಗೆ ತರಬೇತಿ ಪಡೆದ ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರರಾದ ಸೈನಾ ಮತ್ತು ಕಶ್ಯಪ್ ಡಿಸೆಂಬರ್ 2014ರಲ್ಲಿ ವಿವಾಹವಾಗಿದ್ದರು. ಸೈನಾ ಅಧಿಕೃತವಾಗಿ ನಿವೃತ್ತಿ ಹೊಂದಿಲ್ಲವಾದರೂ, ಕಶ್ಯಪ್ ಅಕಾಡೆಮಿಯಲ್ಲಿ ತರಬೇತಿಗೆ ಪರಿವರ್ತನೆಗೊಂಡಿದ್ದರು.
ಸೈನಾ ಅವರು ಒಲಿಂಪಿಕ್ ಪದಕ ಗೆದ್ದ, ವಿಶ್ವ ಚಾಂಪಿಯನ್‌ಶಿಪ್ ಫೈನಲ್ ತಲುಪಿದ ಮತ್ತು ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಎಂದು ಪ್ರಸಿದ್ಧರಾಗಿದ್ದಾರೆ.