Bangalore: ಭಾರೀ ಮಳೆ; ರಸ್ತೆಗಳು ಜಲಾವೃತಗೊಂಡು ವಾಹನ ಸವಾರರ ಪರದಾಟ
Friday, September 19, 2025
ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳು ಜಲಾವೃತ್ತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ ಮಾರ್ಕೆಟ್, ಯಲಹಂಕ, ಓಕಳಿಪುರ, ಸರ್ಜಾಪುರ, ಹೆಬ್ಬಾಳ ಸೇರಿದಂತೆ ಹಲವು ಕಡೆ ಮಳೆಯಿಂದ ತೊಂದರೆಯಾಗಿದೆ.
ಹಲವು ಕಡೆ ಮರಗಳು ಧರೆಗುರುಳಿವೆ. ಚಾಮರಾಜಪೇಟೆಯ ಸಂಗಮ ಸರ್ಕಲ್ ಬಳಿ ಮರ ಧರೆಗುರುಳಿದೆ. ಹೊಸೂರು ರಸ್ತೆ, ಮೈಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ, ಓಕಳಿಪುರ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಕೆ.ಆರ್. ಸರ್ಕಲ್, ಬನ್ನೇರುಘಟ್ಟ ರಸ್ತೆ, ಕಸ್ತೂರಿ ನಗರ, ಹೆಬ್ಬಾಳ ಜಂಕ್ಷನ್ ಸೇರಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಸಂಚಾರಕ್ಕೆ ಪರದಾಡುವಂತಾಗಿದೆ. ಸೆ. 18 ರ ಸಂಜೆಯಿ0ದ ಇಂದು ( ಸೆ. 19) ಬೆಳಗ್ಗೆ 6 ಗಂಟೆವರೆಗೆ ಮಳೆ ಮುಂದುವರಿದ್ದು, ನಗರದಲ್ಲಿ 66.0 ಮಿಮೀ ಮಳೆ ದಾಖಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 130 ಮಿಮೀ ಹಾಗೂ ಬೀದರ್ ಜಿಲ್ಲೆಯಲ್ಲಿ 112 ಮಿಮೀ ಮಳೆ ಸುರಿದಿದೆ. ಸೆಪ್ಟೆಂಬರ್ 24 ರ ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
