Bangalore: ರಾಹುಲ್ ಗಾಂಧಿ ಸಾಮಾನ್ಯ ಜ್ಞಾನವಿಲ್ಲದ ವ್ಯಕ್ತಿ; ಆರ್. ಅಶೋಕ್ ಟೀಕೆ
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಾಮಾನ್ಯ ಜ್ಞಾನ ಇಲ್ಲದ ವ್ಯಕ್ತಿ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಟೀಕಿಸಿದ್ದಾರೆ.
ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 2023ರಲ್ಲಿ ಆಳಂದ ವಿಧಾನಸಭಾ ಚುನಾವಣೆಯಲ್ಲಿ 6 ಸಾವಿರಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆದುಹಾಕುವ ಪ್ರಯತ್ನ ನಡೆದಿತ್ತು ಎಂಬ ರಾಹುಲ್ ಗಾಂಧಿ ಅವರ ಆರೋಪ ಕುರಿತು ಪ್ರಶ್ನೆಗೆ ಅವರು ಉತ್ತರ ನೀಡಿದರು.
ರಾಹುಲ್ ಅವರು ಯಾರೋ ಬರೆದುಕೊಟ್ಟಿದ್ದನ್ನು ಪದೇಪದೇ ಹೇಳಿ ಕಳೆದ 4-5 ವರ್ಷಗಳಿಂದ ದೇಶದಲ್ಲಿ ಅತಿ ಹೆಚ್ಚು ಅಪಹಾಸ್ಯಕ್ಕೆ ಒಳಗಾದ ವ್ಯಕ್ತಿ ಎಂದು ತಿಳಿಸಿದರು. ಮೊನ್ನೆ ಬಂದು ಬಾಂಬ್ ಹಾಕುವೆ, ಮಹದೇವನನ್ನು ಸೃಷ್ಟಿಸುವೆ ಎಂದು ಹೋಗಿದ್ದರು. ಮಹದೇವಪುರದ ಕುರಿತು ಆರೋಪ ಬೋಗಸ್ ಎಂದು ಗೊತ್ತಾಗಿತ್ತು. ಒಂದೇ ಮನೆಯಲ್ಲಿ ನೂರಾರು ಮತ ಎಂದಿದ್ದರು. ಅಲ್ಲಿದ್ದುದು 4 ಮತ ಅಷ್ಟೇ ಮತ ಚಲಾವಣೆ ಆದುದು ಸಾಬೀತಾಗಿತ್ತು. ಈಗ ಮತ್ತೆ ಆಳಂದವನ್ನು ಹಿಡಿದುಕೊಂಡಿದ್ದಾರೆ ಎಂದು ಟೀಕಿಸಿದರು.
ಆಳಂದ ಬಹಳ ದೂರ ಇದೆ. ಬೆಂಗಳೂರು ಪಕ್ಕದ ಮಾಲೂರಿನಲ್ಲಿ ಮತಗಳ್ಳತನ ಎಂದು ಕೋರ್ಟ್ ಆದೇಶ ಮಾಡಿದೆ. ಅಲ್ಲಿನ ಜಿಲ್ಲಾಧಿಕಾರಿ, ಕೋರ್ಟ್ ಆದೇಶವಿದ್ದರೂ ಸಿಸಿ ಟಿವಿ ಮಾಹಿತಿಯನ್ನು ಕೇಳಿದ್ದರೂ ಕೊಟ್ಟಿಲ್ಲ. ಅಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಸದಸ್ಯತ್ವ ವಜಾ ಆಗಿದೆ. ಇದಕ್ಕಿಂತ ಸಾಕ್ಷಿ ಬೇಕೇ ಎಂದು ಕೇಳಿದರು.
ಅಫಿಡವಿಟ್ ಕೊಡಿ ಎಂದು ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ಕೇಳಿದ್ದರೂ ಕೊಟ್ಟಿಲ್ಲ, ಮಾಲೂರಿನಲ್ಲಿ ನಮ್ಮ ಅಭ್ಯರ್ಥಿ ಅಫಿಡವಿಟ್ ಕೊಟ್ಟು, ತನಿಖೆಗೆ ಹೈಕೋರ್ಟಿಗೆ ವಿನಂತಿಸಿದ್ದರು. ಹೈಕೋರ್ಟ್, ಡಿ.ಸಿ. ತಪ್ಪು ಮಾಡಿದ್ದಾಗಿ ತಿಳಿಸಿ ಕ್ರಮ ಕೈಗೊಳ್ಳಲು ಆದೇಶ ಮಾಡಿದೆ. ರಾಹುಲ್ ಗಾಂಧಿಯವರಿಗೆ ಇದರ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.