-->
ಶಬರಿಮಲೆ ಯಾತ್ರೆ ಆರಂಭ; ಮೊದಲ ದಿನವೇ ಹರಿದು ಬಂದ ಭಕ್ತರ ದಂಡು

ಶಬರಿಮಲೆ ಯಾತ್ರೆ ಆರಂಭ; ಮೊದಲ ದಿನವೇ ಹರಿದು ಬಂದ ಭಕ್ತರ ದಂಡು


ಮಂಡಲಕಾಲ ಪೂಜೆಗಾಗಿ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇಗುಲವನ್ನು ತೆರೆಯಲಾಗಿದೆ. ಮುಂದಿನ 2 ತಿಂಗಳುಗಳ ಕಾಲ ಅಯ್ಯಪ್ಪ ಭಕ್ತರಿಗೆ ದೇವರ ದರ್ಶನ ಲಭ್ಯವಾಗಲಿದೆ. .


ಯಾತ್ರೆಯ ಮೊದಲ ದಿನವೇ ಭಕ್ತರ ದಂಡು ದೇವಾಲಯದತ್ತ ಹರಿದು ಬಂದಿತ್ತು. ನ. 15ರಂದು ಸಂಜೆಯಿ0ದಲೇ ಪಂಪಾದಲ್ಲಿ ನೆರೆದಿದ್ದ ಯಾತ್ರಿಕರಿಗೆ ಭಾನುವಾರ ಮಧ್ಯಾಹ್ನದಿಂದ ಬೆಟ್ಟ ಹತ್ತಲು ಅನುಮತಿ ನೀಡಲಾಯಿತು. ತಂತ್ರಿ ಕಂಠರರ್ ಮಹೇಶ್ ಮೋಹನರ್ ಉಪಸ್ಥಿತಿಯಲ್ಲಿ ದೇಗುಲದ ಪ್ರಧಾನ ಅರ್ಚಕ ಅರುಣ್ ಕುಮಾರ್ ನಂಬೂದಿರಿ ದೇಗುಲ ತೆರೆದು ದೀಪ ಬೆಳಗಿದರು. ಮಾಳಿಗಪ್ಪುರಂ ದೇಗುಲ ತೆರೆಯಲು ಪ್ರಧಾನ ಅರ್ಚಕ ವಾಸುದೇವನ್ ನಂಬೂದಿರಿ ಅವರಿಗೆ ಭಸ್ಮ ಮತ್ತು ಕೀಲಿ ಕೈ ಹಸ್ತಾಂತರಿಸಲಾಯಿತು. 

ಪ್ರಧಾನ ಅರ್ಚಕರು 18 ಮೆಟ್ಟಿಲಿಳಿದು ಕೊಡಿಮರದ ಬುಡ ಬಳಿಯ ಕುಂಡಕ್ಕೆ ಅಗ್ನಿ ಸ್ಪರ್ಷ ಮಾಡಿದ ಬಳಿಕ ಇರುಮುಡಿ ಹೊತ್ತ ಭಕ್ತರಿಗೆ 18 ಮೆಟ್ಟಿಲೇರಲು ಅವಕಾಶ ನೀಡಲಾಯಿತು. ಡಿ.2ರವರೆಗೆ ಆನ್‌ಲೈನ್ ಕ್ಯೂ ಬುಕ್ಕಿಂಗ್ ಪೂರ್ಣಗೊಂಡಿದೆ. ವಿಶೇಷ ಕರ್ತವ್ಯದಲ್ಲಿರುವ ಪೊಲೀಸ್, ದೇವಸ್ವಂ ಶಬರಿಮಲೆ ತಲುಪಿದ್ದಾರೆ. ಕೆಎಸ್‌ಆರ್‌ಟಿಸಿ ಪಂಪಾದಲ್ಲಿ ಬಸ್ ನಿಲ್ದಾಣ ತೆರೆದಿದೆ. ನಾನಾ ಡಿಪೋಗಳಿಂದ ಪಂಪಾಕ್ಕೆ ವಿಶೇಷ ಸೇವೆಗಳು ಆರಂಭವಾಗಿವೆ.

ಇನ್ನು ಕರ್ನಾಟಕದಿಂದ ತೆರಳುವ ಭಕ್ತರಿಗೆ ಬೆಂಗಳೂರು - ಎರ್ನಾಕುಲಂ ನಡುವೆ ಸಂಚರಿಸುವ ವಂದೇ ಭಾರತ್ ರೈಲು ಅನುಕೂಲವಾಗಲಿದೆ. ನವೆಂಬರ್ 11 ರಿಂದ ಬೆಂಗಳೂರು - ಎರ್ನಾಕುಲಂ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ ಆರಂಭವಾಗಿದೆ. ಈ ರೈಲಿನಲ್ಲಿ ಭಕ್ತರು ಎರ್ನಾಕುಲಂವರೆಗೂ ತೆರಳಿ ಅಲ್ಲಿಂದ ಬಸ್ ಅಥವಾ ಖಾಸಗಿ ವಾಹನದ ಮೂಲಕ ಪಂಪಾಗೆ ತೆರಳಬಹುದು. ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ಬೆಳಿಗ್ಗೆ 5.10 ಗಂಟೆಗೆ ಈ ರೈಲು ಹೊರಡಲಿದ್ದು, ಮಧ್ಯಾಹ್ನ 1.50 ಕ್ಕೆ ಎರ್ನಾಕುಲಂ ತಲುಪಲಿದೆ. ವಾಪಸ್ ಎರ್ನಾಕುಲಂನಿ0ದ ಮಧ್ಯಾಹ್ನ 2.30 ಕ್ಕೆ ಹೊರಟು ಬೆಂಗಳೂರಿಗೆ ರಾತ್ರಿ 11 ಕ್ಕೆ ವಾಪಸ್ ಆಗಲಿದೆ.


Ads on article

Advertise in articles 1

advertising articles 2

Advertise under the article