ಇಂಡಿಗೋದ 100ಕ್ಕೂ ಅಧಿಕ ವಿಮಾನ ಹಾರಾಟ ರದ್ದು; ಪ್ರಯಾಣಿಕರ ಪರದಾಟ
ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋದಲ್ಲಿ ಮೂರನೇ ದಿನವೂ ವಿಮಾನ ಯಾನ ರದ್ದುಗೊಂಡಿದೆ.
ದೆಹಲಿ, ಮುಂಬೈ, ಬೆಂಗಳೂರು ಏರ್‌ಪೋರ್ಟ್ ಸೇರಿದಂತೆ ವಿವಿಧ ವಿಮಾನ ನಿಲ್ದಾಣಗಳಿಂದ ಸುಮಾರು 200 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು. ಇನ್ನು ಕೆಲ ವಿಮಾನಗಳ ಹಾರಾಟದಲ್ಲಿ ವಿಳಂಬ ಕಂಡುಬ0ದಿತ್ತು. ಈ ಸಮಸ್ಯೆ ಸತತ ಮೂರನೇ ದಿನಕ್ಕೆ ಕಾಲಿಟ್ಟಿದೆ.
ವಿಮಾನದಲ್ಲಿನ ತಾಂತ್ರಿಕ ದೋಷ ಹಾಗೂ ಸಿಬ್ಬಂದಿ ಕೊರತೆ ಇತರ ಸಮಸ್ಯೆಗಳಿಂದ ಇಂದು ಸಹ ದೇಶಾದ್ಯಂತ 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆಗಳಿವೆ. ವ್ಯಾಪಕ ವಿಳಂಬ ಮತ್ತು ರದ್ದತಿಯಿಂದಾಗಿ ದೇಶಾದ್ಯಂತ ಸಾವಿರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು ಕೆಂಪೇಗೌಡ ಏರ್‌ಪೋರ್ಟ್ನಲ್ಲೂ ತಾಂತ್ರಿಕ ದೋಷ ಉಂಟಾಗಿರುವ ಪರಿಣಾಮ 73 ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿದೆ. 43 ವಿಮಾನಗಳ ಹಾರಾಟ ರದ್ದುಗೊಳಿಸಿದ್ದ ಇಂಡಿಗೋ ಇಂದು 73 ವಿಮಾನ ಹಾರಾಟ ರದ್ದುಗೊಳಿಸಿದೆ.
ಇಂಡಿಗೋ ವಿಮಾನಗಳ ವಿಳಂಬ ಮತ್ತು ರದ್ದತಿಗಳ ಹಿಂದಿನ ಕಾರಣಗಳನ್ನ ವಿವರಿಸುವಂತೆ ಮತ್ತು ಪರಿಸ್ಥಿತಿ ಸುಧಾರಿಸಲು ಒಂದು ಯೋಜನೆ ನೀಡುವಂತೆ ಡಿಜಿಸಿಎ ಇಂಡಿಗೋಗೆ ಸೂಚಿಸಿದೆ. ಅಲ್ಲದೇ ಈ ಕುರಿತು ಉನ್ನತ ಮಟ್ಟದ ಸಭೆಗೆ ಇಂಡಿಗೋ ಅಧಿಕಾರಿಗಳಿಗೆ ಬುಲಾವ್ ನೀಡಿದೆ.