ಉಡುಪಿಯ ಅನಾಥ ಹೆಣ್ಮಕ್ಕಳಿಗೆ ಕೂಡಿ ಬಂತು ಕಂಕಣ ಭಾಗ್ಯ..!
Friday, December 12, 2025
ಉಡುಪಿಯ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯ ಇಂದು ಇಬ್ಬರು ಅನಾಥ ಹೆಣ್ಣು ಮಕ್ಕಳ ವಿವಾಹಕ್ಕೆ ಸಾಕ್ಷಿಯಾಯಿತು. ಜಿಲ್ಲಾಧಿಕಾರಿಯೇ ಮುಂದೆ ನಿಂತು ಕನ್ಯಾದಾನ ಮಾಡಿದರು.
ರಾಜ್ಯ ಮಹಿಳಾ ನಿಲಯದ ನಿವಾಸಿ, ಮಾತು ಬಾರದ ಕಿವಿ ಕೇಳದ ಯುವತಿ ಸುಶೀಲಾ ಅವರನ್ನು ಹಾಸನ ಜಿಲ್ಲೆಯ ಕೃಷಿಕ ಯುವಕ ನಾಗರಾಜ ವರಿಸಿದ್ದಾರೆ. ಇನ್ನೋರ್ವ ಯುವತಿ ಬಿಕಾಂ ಪದವೀಧರೆ ಮಲ್ಲೇಶ್ವರಿ ಅವರು ಖಾಸಗಿ ಕಂಪನಿ ಉದ್ಯೋಗಿ ಸಂಜಯ್ ಜೊತೆ ಸಪ್ತಪದಿ ತುಳಿದಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯದ ನೇತೃತ್ವದಲ್ಲಿ ಬೆಳಗ್ಗೆ 10 ಗಂಟೆ ಶುಭಲಗ್ನ ಮುಹೂರ್ತದದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ಕನ್ಯಾದಾನ ಮಾಡಿ, ನವ ದಂಪತಿಗಳಿಗೆ ಆರತಿ ಬೆಳಗುವ ಮೂಲಕ ಮದುವೆಯ ಮುಂದಾಳತ್ವ ವಹಿಸಿಕೊಂಡಿದ್ದು ವಿಶೇಷವಾಗಿತ್ತು. ಅಲ್ಲದೇ ನವ ವಿವಾಹಿತರ ಹೆಸರಿನಲ್ಲಿ ತಲಾ 50 ಸಾವಿರ ಹಣ ಡೆಪಾಸಿಟ್ ಕೂಡಾ ಮಾಡಲಾಗಿದೆ.
1979ರಲ್ಲಿ ಅಸ್ತಿತ್ವಕ್ಕೆ ಬಂದ ಈ ಮಹಿಳಾ ನಿಲಯದಲ್ಲಿ ಈವರೆಗೆ 25 ಅನಾಥ ಹೆಣ್ಣು ಮಕ್ಕಳ ಮದುವೆ ನೆರವೇರಿದ್ದು, ಇದು 26ನೇ ಮದುವೆ. ಮದುವೆ ಸಮಾರಂಭಕ್ಕಾಗಿ ತಿಂಗಳ ಹಿಂದೆಯೇ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿತ್ತು. ಮಹಿಳಾ ನಿಲಯವನ್ನು ಹೂವು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಸಂಪ್ರದಾಯದOತೆ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು.
ಮದುವೆ ಸಮಾರಂಭಕ್ಕೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಸಾಕ್ಷಿಯಾದರು.


.jpeg)
