ಆರೋಪಿಯ ಬಂಧನ ನೆಪದಲ್ಲಿ ಪೊಲೀಸರಿಂದ ದೌರ್ಜನ್ಯ ಆರೋಪ; ಬಿಲ್ಲವ ಯುವ ವೇದಿಕೆ ಪ್ರತಿಭಟನೆಯ ಎಚ್ಚರಿಕೆ
ನ್ಯಾಯಾಲಯದ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯೊಬ್ಬನನ್ನು ಬಂಧಿಸಲು ಬ್ರಹ್ಮಾವರ ಮನೆಯೊಂದಕ್ಕೆ ತೆರಳಿದ ಮಲ್ಪೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮನೆಯ ಯುವತಿ ಅಕ್ಷತಾ ಪೂಜಾರಿ ಎಂಬಾಕೆಯ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದಕ್ಕೆ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಏನಿದು ಪ್ರಕರಣ...?
2014ರಲ್ಲಿ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬೈಕ್ ಅಪಘಾತ ಪ್ರಕರಣದಲ್ಲಿ ಆಶಿಕ್ ಪೂಜಾರಿ ಹಾಗೂ ಇನ್ನೊರ್ವ ಶಿರ್ವದ ಯುವಕ ಆರೋಪಿಗಳಾಗಿದ್ದರು. ಇವರಿಬ್ಬರು ತಲಾ 10 ಲಕ್ಷದಂತೆ ಸಂತ್ರಸ್ತ ದೇವೇಂದ್ರ ಸುವರ್ಣ ಎಂಬವರಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ನ್ಯಾಯಾಲಯದ ಆದೇಶವನ್ನು ಪಾಲಿಸದೇ ಸಂತ್ರಸ್ತರಿಗೆ ಪರಿಹಾರ ಮೊತ್ತ ನೀಡದೆ ಸತಾಯಿಸಿದ್ದು, ಈ ಬಗ್ಗೆ ಕೋರ್ಟ್ ನಿಂದ ಇಬ್ಬರು ಆರೋಪಿಗಳಿಗೂ ಬಂಧನದ ವಾರಂಟ್ ಜಾರಿಯಾಗಿತ್ತು.
ಪ್ರಕರಣದ ಆರೋಪಿಗಳ ಪೈಕಿ ಶಿರ್ವ ದ ಯುವಕ ವಿದೇಶದಲ್ಲಿದ್ದು, ಇನ್ನೊರ್ವ ಬ್ರಹ್ಮಾವರದಲ್ಲಿ ಇರುವ ಬಗ್ಗೆ ಪೊಲೀಸರಿಗೆ ತಾಂತ್ರಿಕ ಮಾಹಿತಿ ಲಭ್ಯವಾಗಿತ್ತು. ತಾಂತ್ರಿಕ ಮಾಹಿತಿ ಆಧರಿಸಿ ಆಶಿಕ್ ಎಂಬಾತನ ಬ್ರಹ್ಮಾವರದಲ್ಲಿರುವ ಸಂಬಂಧಿಕರ ಮನೆಗೆ ಮಲ್ಪೆ ಪೊಲೀಸರು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮಹಿಳೆ, ಯುವತಿ ಅಕ್ಷತಾ ಪೂಜಾರಿ ಹಾಗೂ ವೃದ್ಧರು ಮಾತ್ರ ಇದ್ದರು. ಪೊಲೀಸರು ಬೆಳಗಿನ ಜಾವಾ 4 ಗಂಟೆ ಸುಮಾರಿಗೆ ಬಂದಿದ್ದು, ಇದಕ್ಕೆ ಅಕ್ಷತಾ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಮಾಡಿದ್ದರು. ಹೀಗಾಗಿ ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಮನೆಗೆ ತೆರಳಿ ದೌರ್ಜನ್ಯ ಎಸಗಿದ್ದು, ಅಲ್ಲದೇ ತನ್ನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಕ್ಷತಾ ಪೂಜಾರಿ ಆರೋಪಿಸಿದ್ದಾರೆ.
ಅಲ್ಲದೇ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯು ಅಕ್ಷತಾ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಜಿಲ್ಲಾಧ್ಯಕ್ಷ ಪ್ರವೀಣ್ ಪೂಜಾರಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು. ಪೊಲೀಸರ ದೌರ್ಜನ್ಯದ ವಿರುದ್ಧ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.