-->
 ಹೊಸ ವರ್ಷಾಚರಣೆ ಹಿನ್ನೆಲೆ; ಉಡುಪಿಯಲ್ಲಿ ಹೆಚ್ಚುವರಿ ಭದ್ರತಾ ಕ್ರಮ

ಹೊಸ ವರ್ಷಾಚರಣೆ ಹಿನ್ನೆಲೆ; ಉಡುಪಿಯಲ್ಲಿ ಹೆಚ್ಚುವರಿ ಭದ್ರತಾ ಕ್ರಮ


ಹೊಸ ವರ್ಷಾಚರಣೆಯನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ನಡೆಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಭದ್ರತಾ ಕ್ರಮಗಳನ್ನು ಕೈಗೊಂಡಿದೆ. ಹೊಸ ವರ್ಷದ ದಿನ ಜಿಲ್ಲೆಯಲ್ಲಿ ಇರುವ ಎಲ್ಲಾ ಹೈವೇ ಪಟ್ರೋಲ್ ಹಾಗೂ ಹೊಯ್ಸಳ ವಾಹನಗಳನ್ನು ಕಡ್ಡಾಯವಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಸ್ತಿಗೆ ನಿಯೋಜಿಸಲಾಗಿದೆ. 

ಹೊಸ ವರ್ಷದ ಆಚರಣೆಗಳ ಬಂದೋಬಸ್ತ್ ಹಾಗೂ ಮುಂಜಾಗೃತ ಕ್ರಮಗಳ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರ ನೇತ್ರತ್ವದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಎಲ್ಲಾ ಅಧಿಕಾರಿಗಳ ಸಭೆ ನಡೆಸಲಾಯಿತು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರು, ವೀಲಿಂಗ್ ನಡೆಸುವವರು ಹಾಗೂ ಇತರೆ ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಡಿಸೆಂಬರ್ 31ರ ಬೆಳಿಗ್ಗೆ ಕರಾವಳಿ ಪ್ರದೇಶಗಳ ಸಮುದ್ರ ಹಾಗೂ ಬೀಚ್‌ಗಳಲ್ಲಿ ನಡೆಯುವ ಹೊಸ ವರ್ಷದ ಆಚರಣೆಗಳ ಸುರಕ್ಷತಾ ಕ್ರಮಗಳ ಕುರಿತು ಸಿಎಸ್ಪಿ ಕಚೇರಿಯಲ್ಲಿ ಸಭೆ ನಡೆಸಲಾಗಿದ್ದು, ಸಂಬOಧಿಸಿದ ಠಾಣಾಧಿಕಾರಿಗಳೊಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಂ ಸ್ಟೇಗಳು, ಹೋಟೆಲ್‌ಗಳು, ರೆಸಾರ್ಟ್ಗಳು, ಪಬ್‌ಗಳು ಹಾಗೂ ಬಾರ್‌ಗಳನ್ನು ಪರಿಶೀಲಿಸಲಾಗುತ್ತಿದ್ದು, ರೇವ್ ಪಾರ್ಟಿ, ಡ್ರಗ್ ಪಾರ್ಟಿ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಬುಕಿಂಗ್‌ಗಳು ಹಾಗೂ ವೆಬ್ ಪುಟಗಳ ಮೇಲೂ ನಿಗಾವಹಿಸಲಾಗುತ್ತಿದೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಬ್‌ಗಳಲ್ಲಿ ವಿಶೇಷವಾಗಿ ಸಾಕಷ್ಟು ಸಂಖ್ಯೆಯಲ್ಲಿ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಗರ ವ್ಯಾಪ್ತಿಯಲ್ಲಿ ಉಡುಪಿ ಜಿಲ್ಲಾ “ಅಕ್ಕಪಡೆ” ತಂಡವನ್ನೂ ಕಾರ್ಯಾಚರಣೆಗೆ ಇಳಿಸಲಾಗಿದೆ.

ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ವಿಶೇಷ ಗಮನ ಹರಿಸಲಾಗುತ್ತಿದ್ದು, ವಿದೇಶಿ ನಾಗರಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜವಾಬ್ದಾರಿಯಿಂದ ಆಚರಿಸಿ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಾಪಕವಾಗಿ ಪ್ರಚಾರ ಮಾಡಲಾಗಿದೆ.

ದೊಡ್ಡ ಸಾರ್ವಜನಿಕ ಸಮಾವೇಶಗಳ ಮೇಲ್ವಿಚಾರಣೆ ಹಾಗೂ ಕಾನೂನು–ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೊಲೀಸರು ವಿಶೇಷ ಡ್ರೋನ್ ಕ್ಯಾಮೆರಾಗಳನ್ನು ಬಳಕೆ ಮಾಡುತ್ತಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, 3 ಡ್ರೋನ್ ಕ್ಯಾಮೆರಾ, 10 ಹೆಚ್ಚುವರಿ ಪೆಟ್ರೋಲಿಂಗ್ ವಾಹನಗಳು ಹಾಗೂ 24 ಪಬ್ಲಿಕ್ ಅಡ್ರೆಸ್ ಸಿಸ್ಟಮ್‌ಗಳನ್ನು ಬಳಕೆ ಮಾಡಲಾಗಿದೆ.

ಇದಲ್ಲದೆ ಜಿಲ್ಲೆಯಲ್ಲಿ ಆಯ್ದ ಸ್ಥಳಗಳಲ್ಲಿ ಒಟ್ಟು 13 ಡಿಎಆರ್ ತುಕಡಿ ಹಾಗೂ 2 ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. 

 

Ads on article

Advertise in articles 1

advertising articles 2

Advertise under the article