-->
 ಪಾಂಗಾಳ ಶರತ್ ಶೆಟ್ಟಿ ಕೊಲೆ ಕೇಸ್; ಭೂಗತ ಪಾತಕಿ ಕಲಿ ಯೋಗೀಶ್ ಸಹಿತ ಇಬ್ಬರ ವಿರುದ್ಧ ಕೋಕಾ ಆಕ್ಟ್

ಪಾಂಗಾಳ ಶರತ್ ಶೆಟ್ಟಿ ಕೊಲೆ ಕೇಸ್; ಭೂಗತ ಪಾತಕಿ ಕಲಿ ಯೋಗೀಶ್ ಸಹಿತ ಇಬ್ಬರ ವಿರುದ್ಧ ಕೋಕಾ ಆಕ್ಟ್


ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2022ರ ಡಿಸೆಂಬರ್ ತಿಂಗಳಲ್ಲಿ ನಡೆದ ಪಾಂಗಾಳದ ಶರತ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಭೂಗತ ಪಾತಕಿ ಕಲಿ ಯೋಗೀಶ್ ಸಹಿತ ಇಬ್ಬರ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ (ಸೆಕ್ಷನ್ 3 ಕೋಕಾ ಆಕ್ಟ್)ಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಕೋಕಾ ಕಾಯಿದೆಯಂತೆ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಕೋಟೆ ಗ್ರಾಮದ ತೌಡಬೆಟ್ಟುವಿನ ಯೋಗೀಶ್ ಆಚಾರ್ಯ(54)ನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಕಲಿ ಯೋಗೀಶ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. 

ಜಾಗದ ತಕರಾರು ವಿಚಾರದಲ್ಲಿ ಚಂದ್ರಶೇಖರ ಹಾಗೂ ಇತರರ ಮೇಲೆ ಕಲಿ ಯೋಗೀಶ್, ಯೋಗೀಶ್ ಆಚಾರ್ಯ ಹಾಗೂ ಆತನ ಸಹಚರರು ಹಲ್ಲೆ ನಡೆಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವಿಚಾರದಲ್ಲಿ ಶರತ್ ಶೆಟ್ಟಿ, ಯೋಗೀಶ್ ಆಚಾರ್ಯನನ್ನು ಬೆಂಬಲಿಸದೆ, ಚಂದ್ರಶೇಖರ್‌ಗೆ ಸಹಾಯ ಮಾಡಿರುವುದಾಗಿ, ಶರತ್ ಶೆಟ್ಟಿಯನ್ನು ಕಲಿ ಯೋಗೀಶ್ ಮತ್ತು ಯೋಗೀಶ್ ಆಚಾರ್ಯ ಹಾಗೂ ಆತನ ಸಹಚರರು ಕೊಲೆ ಮಾಡಿದ್ದರು.

ಈ ಎರಡು ಪ್ರಕರಣಗಳ ಪ್ರಮುಖ ಸಾಕ್ಷಿದಾರ ಚಂದ್ರಶೇಖರ್ ಶೆಟ್ಟಿ ಎಂಬವರಿಗೆ 2025ರ ಅ.20ರಂದು ರಾತ್ರಿ ಯೋಗೀಶ್ ಆಚಾರ್ಯ, ತನ್ನ ಹಾಗೂ ತನ್ನ ಸಹಚರರ ವಿರುದ್ಧವಾಗಿ ಸಾಕ್ಷಿ ನುಡಿಯದಂತೆ ಮತ್ತು ಪ್ರಕರಣಗಳನ್ನು ರಾಜಿ ಮಾಡಿಕೊಳ್ಳುವಂತೆ ಹಾಗೂ ಈ ಹಿಂದಿನ ಹಣದ ವಿಚಾರವನ್ನು ಸೆಟಲ್ ಮಾಡುವಂತೆ ಹೇಳಿದ್ದು, ತಪ್ಪಿದಲ್ಲಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಹರ್ಷ ಪ್ರಿಯಂವದಾ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಅಜ್ಜತ್ ಅಲಿ ಮಾರ್ಗದರ್ಶನದಲ್ಲಿ ಕಾಪು ಪೊಲೀಸ್ ಎಸ್ಸೈ ತೇಜಸ್ವಿ ಟಿ.ಐ ಅವರ ತಂಡ ಆರೋಪಿ ಯೋಗೀಶ್ ಆಚಾರ್ಯನನ್ನು ಅ.24ರಂದು ಬಂಧಿಸಿದ್ದರು. ಬಳಿಕ ಈತ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದನು.

ಆರೋಪಿಗಳಾದ ಯೋಗೀಶ್ ಆಚಾರ್ಯ ಹಾಗೂ ಕಲಿ ಯೋಗಿಶ್ ವಿರುದ್ಧ ಕೋಕಾ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸಿದ ಕಾರ್ಕಳ ಎಎಸ್ಪಿ ಡಾ.ಹರ್ಷ ಪ್ರಿಯಂವದಾ ಆರೋಪಿ ಯೋಗೀಶ್ ಆಚಾರ್ಯನನ್ನು ಮತ್ತೆ ಬಂಧಿಸಿದ್ದಾರೆ.

ಬಳಿಕ ಆತನನ್ನು ಮೈಸೂರಿನ ಪ್ರಿನ್ಸಿಪಲ್ ಜಿಲ್ಲಾ ಹಾಗೂ ಸೆಷನ್ಸ್ ಜಡ್ಜ್ ಮತ್ತು ವಿಶೇಷ (ಕೋಕಾ) ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿದೇಶದಲ್ಲಿ ತಲೆಮರೆಸಿಕೊಂಡಿರುವ ಇನ್ನೋರ್ವ ಆರೋಪಿ ಕಲಿ ಯೋಗೀಶ್ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. 

 


Ads on article

Advertise in articles 1

advertising articles 2

Advertise under the article