ಲಕ್ಷಾಂತರ ಮೌಲ್ಯದ ಕಾಫಿ ಬೀಜ ಕಳವು; ದೂರು ದಾಖಲು
ಕೊಡಗಿನ ಪಿರಿಯಾಪಟ್ಟಣದಿಂದ ಮಂಗಳೂರು ಬಂದರಿಗೆ ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಬೀಜಗಳನ್ನು ಕಳ್ಳರು ಎಗರಿಸಿದ್ದಾರೆ.
ನೆಹರುನಗರ ಶೇವಿರೆ ನಿವಾಸಿ ತೃತೇಶ್ ಎಂಬವರು ಮಂಗಳೂರು ಪಣಂಬೂರಿನ ಭವಾನಿ ಶಿಪ್ಪಿಂಗ್ ಸರ್ವಿಸ್ ಏಜೆನ್ಸಿ ಮೂಲಕ ಪಿರಿಯಾಪಟ್ಟಣದಿಂದ ಮಂಗಳೂರಿನ ಬಂದರಿಗೆ ಕಾಫಿ ಬೀಜಗಳನ್ನು ಟ್ರಾನ್ಸ್ರ್ ಪೋರ್ಟ್ ಮಾಡಲು ಬುಕ್ಕಿಂಗ್ ಪಡೆದುಕೊಂಡಿದ್ದರು.
ತನ್ನ ಲಾರಿಯಲ್ಲಿ ಪಿರಿಯಾಪಟ್ಟಣದ ಹೈರೇಂಜ್ ಕಾಫಿ ಕ್ಯೂರಿಂಗ್ ಹೌಸ್ ಕಂಪೆನಿಯಿಂದ ಡಿ.3ರಂದು 320 ಗೋಣಿ ಕಾಫಿ ಬೀಜಗಳನ್ನು ಲೋಡ್ ಮಾಡಿಕೊಂಡು ಮಂಗಳೂರು ಬಂದರಿಗೆ ಹೊರಟು ನೆಹರುನಗರ ಬಳಿ ರಾತ್ರಿ ಲಾರಿಯನ್ನು ನಿಲ್ಲಿಸಿ ಮನೆಗೆ ಹೋಗಿದ್ದರು. ಡಿ.4ರಂದು ಬೆಳಗ್ಗೆ ಮನೆಯಿಂದ ಬಂದು ಮಂಗಳೂರಿಗೆ ಟ್ರಕ್ ಚಲಾಯಿಸಿಕೊಂಡು ಹೋಗಿದ್ದರು.
ಮಂಗಳೂರಿನ ಬಂದರಿನಲ್ಲಿ ಕಂಪೆನಿಯವರು ಕ್ವಾಲಿಟಿ ಚೆಕ್ ಮಾಡಿದಾಗ ಲಾರಿಯ ಹಿಂಬದಿಯ ಸೀಲ್ ಲಾಕ್ ತುಂಡಾಗಿರುವುದು ಕಂಡುಬಂದಿದೆ. ಸ್ಥಳಕ್ಕೆ ಬಂದ ಕಂಪೆನಿಯ ಮೇಲ್ವಿಚಾರಕ ಲಾರಿಯ ಹಿಂಬದಿಯ ಬಾಗಿಲು ತೆರೆದು ನೋಡಿದಾಗ ಸ್ವಲ್ಪ ಭಾಗ ಗೋಣಿ ಚೀಲಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಪರಿಶೀಲಿಸಿ ನೋಡಿದಾಗ ಲಾರಿಯಲ್ಲಿದ್ದ 320 ಗೋಣಿ ಕಾಫಿ ಬೀಜಗಳ ಪೈಕಿ 80 ಗೋಣಿ ಕಾಫಿ ಬೀಜಗಳನ್ನು ಕಳ್ಳರು ಎಗರಿಸಿದ್ದಾರೆ. ಕಳವಾಗಿರುವ ಕಾಫಿ ಬೀಜಗಳ ಅಂದಾಜು ಮೌಲ್ಯ ರೂ.21,44,000 ಎಂದು ಅಂದಾಜಿಸಲಾಗಿದ್ದು.
ತೃತೇಶ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.