ಸೈಫುದ್ದೀನ್ ಕೊಲೆ ಪ್ರಕರಣ; ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ, ಕೋಕಾ ಕಾಯ್ದೆಯಡಿ ತನಿಖೆ
Sunday, December 28, 2025
ಎಕೆಎಂಎಸ್ ಬಸ್ ಮಾಲಕ ಸೈಫುದ್ದೀನ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ತಲೆಮರೆಸಿಕೊಂಡ ಆರೋಪಿ ಸೇರಿದಂತೆ ಎಲ್ಲಾ 6 ಆರೋಪಿಗಳ ವಿರುದ್ಧವೂ ಸೆಕ್ಷನ್ 3 ಕೋಕಾ ಕಾಯ್ದೆ ದಾಖಲಿಸಲಾಗಿದೆ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡವೂರು ಎಂಬಲ್ಲಿ ಸೆ.27ರಂದು ನಡೆದ ಎಕೆಎಂಎಸ್ ಬಸ್ ಮಾಲಕ ಸೈಫ್ ಯಾನೆ ಸೈಯಿಪುದ್ದಿನ್ ಆತ್ರಾಡಿ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯಿದೆ(ಸೆಕ್ಷನ್ 3 ಕೋಕಾ ಆ್ಯಕ್ಟ್)ನಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಮಿಷನ್ ಕಂಪೌಂಡ್ ಬಳಿ ನಿವಾಸಿ ಮಹಮದ್ ಫೈಸಲ್ ಖಾನ್, ಕರಂಬಳ್ಳಿಯ ಮೊಹಮದ್ ಶರೀಫ್, ಕೃಷ್ಣಾಪುರದ ಅಬ್ದುಲ್ ಶುಕುರ್,ಫೈಸಲ್ ಖಾನ್ ಪತ್ನಿ ರಿಧಾ ಶಭನಾ, ಮಾಲಿ ಮೊಹಮ್ಮದ್ ಸಿಯಾನ್ ಎಂಬವರು ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ.
ಕೋಕಾ ಕಾಯಿದೆಯನ್ನು ಅಳವಡಿಸಿದಾಗ ಆ ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳ ಅಕ್ರಮ ಸಂಪಾದನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.