ಕಂಬಳ ಕರೆಯ ಪದಕಗಳ ಸರದಾರ "ಬೋಳಾರ ಕುಟ್ಟಿ" ನಿಧನ
Saturday, December 06, 2025
ಕಂಬಳ ಕರೆಯ ಅಡ್ಡ ಹಲಗೆ ವಿಭಾದ ಚಾಂಪಿಯನ್, 150ಕ್ಕೂ ಅಧಿಕ ಪದಕಗಳ ಸರದಾರ "ಬೋಳಾರ ಕುಟ್ಟಿ" ಡಿ. 5ರ ರಾತ್ರಿ ನಿಧನ ಹೊಂದಿದೆ.
ಅಡ್ಡ ಹಲಗೆ ಹಾಗೂ ಕನೆ ಹಲಗೆ ವಿಭಾಗದಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಕುಟ್ಟಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದ. ಸುರತ್ಕಲ್ ಸರ್ವೋತ್ತಮ ಮಾಧವ ಪ್ರಭು ಅವರ ಮಾಲಕತ್ವದಲ್ಲಿದ್ದ ಕುಟ್ಟಿ 92 ಪದಕಗಳನ್ನು ಪಡೆದಿದ್ದ. ಬಳಿಕ 2019ರಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ಅವರು ಕುಟ್ಟಿಯನ್ನು ಖರೀದಿಸಿದ್ದರು.
ಕನೆ ಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಚಿಮ್ಮಿಸುವ ಮೂಲಕ ಕುಟ್ಟಿ ಹಲವು ಬಾರಿ ಪದಕ ಪಡೆದಿತ್ತು. ತ್ರೀಶಾಲ್ ಅವರಿಗೆ 50ಕ್ಕೂ ಅಧಿಕ ಪ್ರಶಸ್ತಿ ದೊರಕಿಸಿಕೊಟ್ಟ ಕುಟ್ಟಿ 150ಕ್ಕೂ ಅಧಿಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು.
ಕಳೆದ ವರ್ಷ ಕಂಬಳದ ವೇಳೆ ಕುಟ್ಟಿಯ ಕೊಂಬಿಗೆ ಗಾಯವಾಗಿತ್ತು. ಅನಾರೋಗ್ಯ ಪೀಡಿತನಾಗಿದ್ದ ಕುಟ್ಟಿ ಕಂಬಳ ಕರೆಯ ಓಟದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ.
ಇಹಲೋಕ ತ್ಯಜಿಸಿದ ಬೋಳಾರ ಕುಟ್ಟಿಯ ಸಕಲ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.