-->
ಜೈ ಬಾಪು ಜೈ ಭೀಮ್ - ಜೈ ಸಂವಿಧಾನ ಸಮಾವೇಶ (Video)

ಜೈ ಬಾಪು ಜೈ ಭೀಮ್ - ಜೈ ಸಂವಿಧಾನ ಸಮಾವೇಶ (Video)


ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಆಶ್ರಯದಲ್ಲಿ ಜೈ ಬಾಪು ಜೈ ಭೀಮ್ - ಜೈ ಸಂವಿಧಾನ ಸಮಾವೇಶವು ಉಡುಪಿಯ ಅಜ್ಜರಕಾಡು ಪುರಭವನದಲ್ಲಿ ನಡೆಯಿತು. ಸಮಾವೇಶ ಉದ್ಘಾಟನೆಗೂ ಮೊದಲು  ಮಹಾತ್ಮಾ ಗಾಂಧಿ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.



ಸಮಾವೇಶವನ್ನು ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯ ಉಪಾಧ್ಯಕ್ಷ, ಉಡುಪಿ ಜಿಲ್ಲೆಯ ಪ್ರಚಾರ ಸಮಿತಿಯ ಉಸ್ತುವಾರಿ ಕಿಮ್ಮನೆ ರತ್ನಾಕರ್  ಅವರು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಗಾಂಧಿ ವಿಚಾರ ಧಾರೆಗಳು, ಜೀವನ ಚರಿತ್ರೆ,  ಸೈದ್ಧಾಂತಿಕ ನಿಲುವುಗಳನ್ನು ಕಾರ್ಯಕರ್ತರಿಗೆ ತಲುಪಿಸಿ ಕಾಂಗ್ರೆಸ್ ಪಕ್ಷ ಸಂಘಟಿಸಬೇಕಾಗಿದೆ ಎಂದರು. ಬಿಜೆಪಿಯವರು ದೇಶ ಕಟ್ಟುವ ಬದಲು  ಧರ್ಮ ಕಟ್ಟುತ್ತಿದ್ದಾರೆ . ಇದರಿಂದ ದೇಶಕ್ಕೆ ಉಪಯೋಗವಿಲ್ಲ. ಅಲ್ಲದೇ  ಗಾಂಧಿ, ನೆಹರು ಅವರನ್ನು ಬಿಜೆಪಿಯು ವಿರೂಪಗೊಳಿಸುತ್ತಿದೆ.  ಹಾಗಾಗಿ ಕಾಂಗ್ರೆಸ್ ಪಕ್ಷವು ಗಾಂಧಿ ಚಿಂತನೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಬೇಕಾಗಿದೆ ಎಂದರು.  

ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಪ್ರಾಸ್ತಾವಿಕವಾಗಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ 100ರ ಸಂಭ್ರಮದ ಸವಿನೆನಪಿಗಾಗಿ ಈ ಕಾರ್ಯಕ್ರಮ ರಾಜ್ಯದ ವಿವಿಧೆಡೆ ಆಯೋಜಿಸಲಾಗಿದೆ. ಪ್ರತೀ ಜಿಲ್ಲೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇಲ್ಲೂ ನಡೆಯುತ್ತಿದೆ ಎಂದರು. ಪಕ್ಷವನ್ನು ಸಿದ್ಧಾಂತದ ಮೇಲೆ ಕಟ್ಟುವ ನಿಟ್ಟಿನಲ್ಲಿ ತರಬೇತಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜನಪರ ಕಾರ್ಯಗಳಿಂದಾಗಿ ಕರ್ನಾಟಕದ ಜನ ಆರ್ಥಿಕವಾಗಿ ಸದೃಢರಾಗಿದ್ದಾರೆ. ಹಾಗಾಗಿ ತಲಾ ಆದಾಯದಲ್ಲಿ ಕರ್ನಾಟಕ ದೇಶಕ್ಕೇ ನಂಬರ್ ವನ್ ಆಗಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗ್ಯಾರಂಟಿ ಯೋಜನೆಗಳನ್ನು ಅಣಕಿಸಿದ್ದು, ದೇಶ ದಿವಾಳಿಯಾಗುತ್ತದೆ ಎಂದಿದ್ದರು. ಈಗ  ಬಿಹಾರದಲ್ಲಿ 10 ಸಾವಿರ ಕೊಡುವಾಗ ದಿವಾಳಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. 

ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ,  ಪ್ರಚಾರ ಸಮಿತಿಯ ಉಪಾಧ್ಯಕ್ಷ ಮುನೀರ್ ಜನ್ಸಾಲೆ , ಮುಖ್ಯ ಸಂಯೋಜಕ, ಚಲನಚಿತ್ರ ನಟ, ನಿರ್ದೇಶಕ ಎಸ್ .ನಾರಾಯಣ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಂಜುನಾಥ್ ಪೂಜಾರಿ ಮುದ್ರಾಡಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಖಂಡರುಗಳಾದ ದಿನೇಶ್ ಹೆಗ್ಡೆ ಮೊಳಹಳ್ಳಿ , ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಪ್ರಸಾದ್ ರಾಜ್ ಕಾಂಚನ್,  ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ , ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಘಟಕಗಳ ಅಧ್ಯಕ್ಷರು, 7 ತಾಲೂಕು ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಮಿತಿಯ ಮತ್ತು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರುಗಳು ಉಪಸ್ಥಿತರಿದ್ದರು. 

ಉಡುಪಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸ್ವಾಗತಿಸಿದರು. ಶ್ರೀಧರ್ ಪಿ.ಎಸ್. ಕಾರ್ಯಕ್ರಮ ನಿರೂಪಿಸಿದರು. 









Ads on article

Advertise in articles 1

advertising articles 2

Advertise under the article