ರಾಜ್ಯ ಡ್ರಗ್‌ನಲ್ಲೇ ಮುಳುಗಿದೆ; ಸರ್ಕಾರ ಸತ್ತಿದೆ, ಪೊಲೀಸರೇ ಕಳ್ಳರಾಗಿದ್ದಾರೆ: ಆರ್. ಅಶೋಕ್ ಕಿಡಿ(video)
ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯ ಡ್ರಗ್‌ನಲ್ಲೇ ಮುಳುಗಿ ಹೋಗಿದೆ. ಡ್ರಗ್ ಹಂಚಿಕೆಯಲ್ಲಿ ಪೊಲೀಸರೇ ಶಾಮಿಲಾಗಿದ್ದು, ಪೊಲೀಸರೇ ಕಳ್ಳರಾಗಿದ್ದಾರೆ. ರಾಜ್ಯದಲ್ಲಿ ಸರ್ಕಾರ ಹಾಗೂ ಗೃಹ ಇಲಾಖೆ ಸಂಪೂರ್ಣ ಸತ್ತು ಹೋಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯ ಕಾಪು ಮಂಥನ ರೆಸಾರ್ಟ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ಡ್ರಗ್ ಮಾಫಿಯಾವನ್ನು ಮಹಾರಾಷ್ಟ್ರ ಪೊಲೀಸರು ಬಯಲಿಗೆಳೆದಿದ್ದಾರೆ. ಆದರೆ ಇಲ್ಲಿರುವ ಪೊಲೀಸರಿಗೆ ಡ್ರಗ್ ಜಾಲ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಹೊರ ರಾಜ್ಯದ ಪೊಲೀಸರು ಕಾನೂನು ಸುವ್ಯವಸ್ಥೆ ಕಾಪಾಡುವ ಪರಿಸ್ಥಿತಿ ಬಂದಿದೆ. ಡ್ರಗ್ ಮಾಫಿಯವನ್ನು ಹೊರ ರಾಜ್ಯದ ಪೊಲೀಸರೇ ಬಯಲಿಗೆ ಎಳೆಯುತ್ತಾರೆ ಎಂದರೆ ರಾಜ್ಯ ಸರ್ಕಾರ, ಗೃಹ ಇಲಾಖೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಜೈಲುಗಳು ಹಣ ವಸೂಲಿ ಮಾಡುವ ಕೇಂದ್ರಗಳಾಗುತ್ತಿದೆ. ಪ್ರತೀ ದಿನ ವಿಐಪಿ ಖೈದಿಗಳಿಗೆ ಎಣ್ಣೆ, ಡ್ರಗ್, ಬಿರಿಯಾನಿ ಸರಬರಾಜು ಮಾಡುವುದರಲ್ಲಿ ಪೊಲೀಸರು ಶಾಮೀಲಾಗಿದ್ದಾರೆ. ಇದನ್ನು ಪ್ರಶ್ನಿಸುವ ರಾಜ್ಯ ಸರ್ಕಾರ ಸತ್ತೋಗಿದೆ. ಗೃಹ ಮಂತ್ರಿಗಳು ಕಾಣೆಯಾಗಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಜಗಳದಲ್ಲಿ ಮುಳುಗಿ ಹೋಗಿದ್ದಾರೆ. ಮುಖ್ಯಮಂತ್ರಿ ಯಾರೆಂಬುದೇ ಗೊಂದಲದಲ್ಲಿದೆ. ಒಂದು ದಿನ ಡಿಕೆ ಶಿವ ಕುಮಾರ್ ಮತ್ತೊಂದು ದಿನ ಸಿದ್ದರಾಮಯ್ಯ ಸಿಎಂ ಎನ್ನುವ ಗಿಣಿ ಶಾಸ್ತçದಲ್ಲೇ ರಾಜ್ಯಸರ್ಕಾರ ಮುಳುಗಿ ಹೋಗಿದೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಕಾಂಗ್ರೆಸ್ ಎಂಎಲ್‌ಎಗಳು ನಾನ್ಯಾಕೆ ಸಿಎಂ ಆಗಬಾರದು ಎನ್ನುವ ಜಿದ್ದಿಗೆ ಬಿದ್ದಿದ್ದಾರೆ. ಅಧಿಕಾರ ಹಂಚಿಕೆ ಮಾಡುವ ಕಾಂಗ್ರೆಸ್ ಹೈಕಮಾಂಡ್ ಸತ್ತು ಹೋಗಿದೆ. ಎಲ್ಲವೂ ರಾಹುಲ್ ಗಾಂಧಿಯ ತೀರ್ಮಾನದಂತೆ ನಡೆಯುತ್ತಿದೆ. ರಾಹುಲ್ ಗಾಂಧಿ ಕೇವಲ ವಿದೇಶಕ್ಕೆ ತೆರಳಿ ಭಾರತವನ್ನು ಬೈಯುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಿಡಿ ಕಾರಿದರು.