ವಾರಾಹಿ ನದಿ ಉಳಿವಿಗಾಗಿ ಬೃಹತ್ ಜನಾಂದೋಲನಾ ಸಭೆ
ಸಿದ್ಧಾಪುರ ಏತ ನೀರಾವರಿ ಯೋಜನೆ ನಿಲ್ಲಿಸಲು ನಾನು ಯತ್ನಿಸಿದ್ದೇನೆ ಎನ್ನುವುದನ್ನು ಸಾಬೀತುಮಾಡಿದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ.ಇಲ್ಲಾ ಸುಳ್ಳು ಹೇಳಿದ ತಪ್ಪಿಗೆ ನೀವು ಸನ್ಯಾಸ ತೆಗೆದುಕೊಳ್ಳಬೇಕು. ಮನೆ ಮನೆಗೆ ಹೋಗಿ ಜನರನ್ನು ದಾರಿ ತಪ್ಪಿಸುವುದನ್ನು ಬಿಡಿ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದ್ದಾರೆ.
ಅವರು ಭಾನುವಾರ ಕಂಡ್ಲೂರಿನಲ್ಲಿ ವಾರಾಹಿ ನದಿ ತಟದಲ್ಲಿರುವ ಗ್ರಾಮಗಳ ಕುಡಿಯುವ ನೀರು, ಕೃಷಿ ಮತ್ತು ನದಿಯ ಅಸ್ತಿತ್ವಕ್ಕೆ ಅಪಾಯ ಉಂಟುಮಾಡುವ ಅವೈಜ್ಞಾನಿಕ ಏತ ನೀರಾವರಿ ಯೋಜನೆ ವಿರೋಧಿಸಿ ವಾರಾಹಿ ನದಿ ನೀರು ಬಳಕೆದಾರರ ಬೃಹತ್ ಜನಾಂದೋಲನಾ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾನು ಸ್ವಾರ್ಥಕ್ಕೊಸ್ಕರ ಪತ್ರ ಕೊಟ್ಟಿಲ್ಲಾ, ಮೇಲಿನಿಂದ ನೀರು ತಿರುಗಿಸಿದರೆ ಕೆಳಗಿನ ರೈತರಿಗೆ ಸಮಸ್ಯೆಯಾಗುತ್ತದೆ ಎನ್ನುವ ಉದ್ದೇಶಕ್ಕೆ ಪತ್ರ ನೀಡಿದೆ. ನಾನು ಶಾಸಕರಿಗೆ ಸವಾಲ್ ಹಾಕುತ್ತೇನೆ, ಶಾಸಕರೇ ನೀವು ಕಾಲು ಮುರಿಯುವುದು ಯಾರದ್ದು, ಡ್ಯಾಮ್ ಕೆಳಗೆ ಇರುವ ರೈತರದ್ದಾ, ಇಲ್ಲಾ ಮಾಜಿ ಶಾಸಕನಾದ ನನ್ನ ಕಾಲು ಮುರಿತಿರಾ, ಓರ್ವ ರೌಡಿಯಂತೆ ಮಾತನಾಡುತ್ತಿರುವ ನೀವು ಶಾಸಕ ಎನ್ನುವುದನ್ನು ಮರೆತಂತಿದೆ. ನೀವು ಕಾಲು ಮುರಿಯಲು ಬನ್ನಿ, ನಿಮ್ಮನ್ನು ಜೈಲಿಗೆ ಕಳುಹಿಸುವ ಕೆಲಸ ನಾನು ಮಾಡುತ್ತೇನೆ. ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ಮುಂದಿಟ್ಟು ನೀವು ಮಾಡುತ್ತಿರುವ ರಾಜಕೀಯ ಇದು, ಕಾಂಗ್ರೆಸ್ ಮುಗಿಸುವ ಯತ್ನ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯನ್ನು ರೈತ ಮುಖಂಡ ಸಂಪಿಗೇಡಿ ಸಂಜೀವ ಶೆಟ್ಟಿ, ಬಿಂದಿಗೆಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ರೈತ ಮುಖಂಡ ಬಲಾಡಿ ಸಂತೋಷ್ ಶೆಟ್ಟಿ, ವಾರಾಹಿ ನೀರಾವರಿ ಯೋಜನೆ 1979ರಲ್ಲಿ ಆರಂಭಗೊಂಡಿದ್ದು, ಮೂಲ ಯೋಜನೆಯಂತೆ 38,800 ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕಾಗಿದೆ. ಆದರೆ ಮೂಲ ಕಾಮಗಾರಿಗಳು ಪೂರ್ಣಗೊಳ್ಳುವ ಮುನ್ನವೇ ಸಿದ್ದಾಪುರ ಹೋರಿ ಯಬ್ಬೆ ಬಳಿ ನಿರ್ಮಿಸಿರುವ ಡೈವರ್ಷನ್ ವಿಯರ್‌ನ ಮೇಲ್ಭಾಗದಿಂದ ಏತ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತಿರುವುದು ನದಿ ಹಾಗೂ ಕೆಳಭಾಗದ ಗ್ರಾಮಗಳಿಗೆ ಮಾರಕವಾಗಿದೆ ಯಾರೋ ಒಬ್ಬಿಬ್ಬರು ಪ್ರಭಾವಿಗಳಿಗೊಸ್ಕರ ಸಿದ್ಧಾಪುರ ಏತ ನೀರಾವರಿ ಮಾಡುವ ಮೂಲಕ ಡ್ಯಾಮ್ ಬುಡಕ್ಕೆ ಕೊಡಲಿ ಹಾಕಲು ಹೊರಟಿದ್ದಾರೆ. ನಿಮಗೆ ತಾಕತ್ತಿದ್ದರೇ ನಮ್ಮ ರೈತರನ್ನು ತಡೆಯಿರಿ. ಸಿದ್ದಾಪುರಕ್ಕೆ ಏತ ನೀರಾವರಿ ಅಗತ್ಯ ಎಂಬುದರಲ್ಲಿ ವಿರೋಧವಿಲ್ಲ. ಆದರೆ ಅವೈಜ್ಞಾನಿಕ ಜಾಕ್‌ವೆಲ್ ಪಾಯಿಂಟ್ ಬದಲಿಸಿ, ಏತ ನೀರಾವರಿ ಯೋಜನೆಯನ್ನು ವಾರಾಹಿ ಡೈವರ್ಷನ್ ವಿಯರ್‌ನ ಕೆಳಭಾಗಕ್ಕೆ ಸ್ಥಳಾಂತರಿಸಬೇಕು ಎಂದರು.
ಇನ್ನೋರ್ವ ಮುಖಂಡ ವಿಕಾಸ್ ಹೆಗ್ಡೆ ಮಾತನಾಡಿ, ವಾರಾಹಿ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಹೊರಬರುವ ನೀರು ಗರಿಷ್ಠ 1,100 ಕ್ಯೂಸೆಕ್ಸ್ ಮಾತ್ರವಾಗಿದ್ದು, ಬೇಸಿಗೆಯಲ್ಲಿ 275 ಕ್ಯೂಸೆಕ್ಸ್‌ಗೆ ಇಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮೇಲ್ಭಾಗದಿಂದ ನೀರನ್ನು ಏತ ನೀರಾವರಿಗಾಗಿ ಎತ್ತಿಕೊಳ್ಳುವುದರಿಂದ ಉಡುಪಿ, ಕುಂದಾಪುರ, ಬೈಂದೂರು, ಕಾಪು ಸೇರಿದಂತೆ ಹಲವು ಪ್ರದೇಶಗಳ ಕುಡಿಯುವ ನೀರಿನ ಯೋಜನೆಗಳಿಗೆ ತೀವ್ರ ತೊಂದರೆ ಉಂಟಾಗಲಿದೆ. ವರಾಹಿ ನೀರಿಗಾಗಿ ಹೋರಾಟಕ್ಕೆ ಹೊರಟರೆ ಗಂಟಲು ಒತ್ತಿ ಹಿಡಿಯುತ್ತೇನೆ ಎನ್ನುತ್ತಿರಿ ಶಾಸಕರೆ,ಗಂಟಲು ಒತ್ತಿ ಬಳಿಕ ನೀರು ಬಿಡಲು ರೈತರು ಕೋಳಿ ಅಂಕದ ಕೋಳಿಗಳಲ್ಲಾ ಶಾಸಕರೇ, ಇಲ್ಲಿ ನೀರು ಕೇಳುತ್ತಿರುವವರು ಬೇರೆ ದೇಶದವರಲ್ಲ, ನಿಮ್ಮ ಮತದಾರರು ಮರೆಯ ಬೇಡಿ ಎಂದರು..
ಸಭೆಯ ಬಳಿಕ ಸಹಾಯಕ ಜಿಲ್ಲಾಧಿಕಾರಿ ಅಬೀದ್ ಗದ್ಯಾಝ್ ಅವರಿಗೆ ಮನವಿ ಹಸ್ತಾಂತರಿಸಲಾಯಿತು. ಹೊಸದಾಗಿ ನಡೆಯುತ್ತಿರುವ ಯೋಜನೆಯ ಸಾಧಕ ಬಾಧಕಗಳ ಪರಿಶೀಲನೆ ಗೆ ತಜ್ಞರನ್ನು ನೇಮಿಸಬೇಕು ಮತ್ತು ತಕ್ಷಣ ಕಾಮಗಾರಿ ನಿಲುಗಡೆ ಮಾಡಿ ರೈತರಿಗೆ ನ್ಯಾಯ ದೊರಕಿಸಬೇಕು ಎಂದು ಮನವಿ ಸಲ್ಲಿಸಲಾಯಿತು. ಸಭೆಯಲ್ಲಿ ರೈತರ ಮುಖಂಡರು ನಾಯಕರು ಭಾಗವಹಿಸಿದ್ದರು.



