ಮೀನುಗಾರರಿಗೂ ಕೃಷಿಕರಂತೆ ಸೌಲಭ್ಯಗಳು ಸಿಗುವಂತಾಗಲಿ- ಯಶ್ ಪಾಲ್ ಸುವರ್ಣ
ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗುವ ಮೂಲಕ ದೇಶದ ಆರ್ಥಿಕತೆಗೆ ಸಹಕಾರಿ ಕ್ಷೇತ್ರ ಕೂಡಾ ಬಹುದೊಡ್ಡ ಶಕ್ತಿಯನ್ನು ನೀಡಿದೆ ಎಂದು ಶಾಸಕ ಯಶ್ ಪಾಲ್ ಎ.ಸುವರ್ಣ ಹೇಳಿದರು.
ಅವರು ಕಡಿಯಾಳಿ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ. ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ. ಉಡುಪಿ ಹಾಗೂ ಉಡುಪಿ ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಮೈಸೂರು ವಿಭಾಗದ ಮೀನುಗಾರರ ಸಹಕಾರ ಸಂಘಗಳ ಪದಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕರ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮೀನುಗಾರಿಕೆ ಕೂಡಾ ಕೃಷಿಯ ಒಂದು ಭಾಗವಾಗಿದೆ. ಭೂಮಿಯಲ್ಲಿ ರೈತರು ಕೃಷಿ ಬೆಳೆದಂತೆ, ಮೀನುಗಾರರು ಕೂಡಾ ಸಮುದ್ರ, ಹೊಳೆಯಲ್ಲಿ ಜೀವದ ಹಂಗು ತೊರೆದು ನಡೆಸುವ ಕಷ್ಟದ ಉದ್ಯಮವಾಗಿದೆ. ಅದೇ ರೀತಿ ಕೃಷಿಕರಿಗೆ ಸಿಗುವ ಸೌಲಭ್ಯಗಳಂತೆ ಮೀನುಗಾರರಿಗೂ ಕೂಡಾ ಸವಲತ್ತುಗಳ ದೊರೆಯಬೇಕಾದ ಅನಿವಾರ್ಯತೆ ಇದೆ ಎಂದು ಶಾಸಕ ಯಶ್ ಪಾಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೀನುಗಾರಿಕೆಗೆ ಸಂಬಂಧಪಟ್ಟ ನಿಯಮಗಳು ಕೂಡಾ ಒಂದೊಂದು ರಾಜ್ಯದಲ್ಲಿ ಒಂದೊಂದು ವಿಧವಾಗಿದೆ. ಹಾಗಾಗಿ ಮೀನುಗಾರಿಕೆಯ ನಿಯಮ ಮತ್ತು ಮೀನುಗಾರರಿಗೆ ಕೃಷಿಕರಿಗೆ ಸಿಗುವ ಸೌಲಭ್ಯಗಳು ಸಿಗುವಂತಾಗಲಿ ಎಂದು ಈ ಕಾರ್ಯಾಗಾರದ ಮೂಲಕ ಸರ್ಕಾರದ ಗಮನ ಸೆಳೆಯುವಂತಾಗಲಿ ಎಂದು ಯಶ್ ಪಾಲ್ ಸುವರ್ಣ ಒತ್ತಾಯಿಸಿದರು.
ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕತೆ ವಹಿಸಿದ್ದ, ಉಡುಪಿ ಜಿಲ್ಲಾ ಸಹಕಾರ (ರಿ) ಯೂನಿಯನ್ ನ ಅಧ್ಯಕ್ಷರಾದ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರು ಮಾತನಾಡಿ, ಜ್ಞಾನ ಎನ್ನುವುದು ನಿರಂತರ ಕಲಿಕೆಗೆ ಸಹಕಾರಿ. ಆ ನಿಟ್ಟಿನಲ್ಲಿ ಇಂದು ಹಮ್ಮಿಕೊಂಡ ಕಾರ್ಯಾಗಾರ ಎಲ್ಲರಿಗೂ ಮಹತ್ವವಾದದ್ದು. ಮೀನುಗಾರ ಸಮುದಾಯ ಸಹಕಾರಿ ಸಂಘದ ಅಭಿವೃದ್ಧಿಗೆ ಕಾರಣಿಭೂತವಾಗಿದೆ. ಅದೇ ರೀತಿ ಸಹಕಾರಿ ಕ್ಷೇತ್ರ ಹಾಗೂ ಮೀನುಗಾರಿಕೆ ಕ್ಷೇತ್ರ ಜತೆ, ಜತೆಯಾಗಿ ಸಾಗುವ ಮೂಲಕ ತಮ್ಮ ಆರ್ಥಿಕ ಅಭಿವೃದ್ಧಿಯತ್ತ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ನಿರ್ದೇಶಕರಾದ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್.ಲಾವಣ್ಯ, ಮೀನುಗಾರಿಕಾ ಉಪನಿರ್ದೇಶಕ ಕುಮಾರಸ್ವಾಮಿ ಬಿ.ವಿ, ಅಲೆವೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ನಿವೃತ್ತ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಎಸ್.ಎನ್.ಸಂತೋಷ್ ಕುಮಾರ್ ಅವರು ವ್ಯಕ್ತಿತ್ವ ವಿಕಸನ ಮತ್ತು ಒತ್ತಡ ನಿರ್ವಹಣೆ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಧ್ಯಾಹ್ನ 2-30ರಿಂದ 3-30ರವರೆಗೆ ಮೀನುಗಾರಿಕಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ ಬಿ.ವಿ ಉಪನ್ಯಾಸ ನೀಡಿದರು. ಸಂಜೆ 4ರಿಂದ ಸಂತೋಷ್ ಕುಮಾರ್ ಅವರು ಸಹಕಾರ ಸಂಘಗಳಲ್ಲಿ ಆಂತರಿಕ ಸಂಬಂಧ ಮತ್ತು ಪರಿಣಾಮಕಾರಿ ಸಂವಹನ ಕುರಿತು ಉಪನ್ಯಾಸ ನೀಡಿದರು.





