ಅಸಂಘಟಿತ ಕಾರ್ಮಿಕರು ಕೇಂದ್ರ ಪಿಂಚಣಿ ಯೋಜನೆಗಳ ಲಾಭ ಪಡೆಯಲಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ
ಅಸಂಘಟಿತ ವಲಯದ ಕಾರ್ಮಿಕರು, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಯೋಜನೆ ಹಾಗೂ ಎನ್‌ಪಿಎಸ್ ಟ್ರೇಡರ್ಸ್ (ರಾಷ್ಟ್ರೀಯ ಪಿಂಚಣಿ ಯೋಜನೆ)ಗಳ ಲಾಭವನ್ನು ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು.
ಅವರು ಉಡುಪಿಯ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ವಿಶೇಷ ನೋಂದಣಿ ಅಭಿಯಾನ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಹಾಗೂ ವ್ಯಾಪಾರಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗಳಡಿ ಜನವರಿ 15ರಿಂದ ಮಾರ್ಚ್ 15ರವರೆಗೆ ಜಿಲ್ಲೆಯಾದ್ಯಂತ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ವಯಸ್ಸಿಗೆ ಅನುಗುಣವಾಗಿ ತಿಂಗಳಿಗೆ ₹55ರಿಂದ ₹200ರವರೆಗೆ ವಂತಿಕೆ ಪಾವತಿಸಿದಲ್ಲಿ, 60 ವರ್ಷಗಳ ನಂತರ ತಿಂಗಳಿಗೆ ₹3,000 ಪಿಂಚಣಿ ಸೌಲಭ್ಯ ದೊರೆಯಲಿದೆ ಎಂದು ಅವರು ತಿಳಿಸಿದರು. ಆದಾಯ ತೆರಿಗೆ ಪಾವತಿದಾರರು, ಇಎಸ್‌ಐ, ಇಪಿಎಫ್ ಹಾಗೂ ಎನ್‌ಪಿಎಸ್ ಯೋಜನೆಗಳ ಫಲಾನುಭವಿಗಳಿಗೆ ಈ ಯೋಜನೆ ಅನ್ವಯಿಸುವುದಿಲ್ಲ ಎಂದರು.
ಅಸಂಘಟಿತ ಕಾರ್ಮಿಕರಿಗೆ ಈ ಯೋಜನೆಗಳ ಕುರಿತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಕೃಷಿ ಸಖಿಯರು, ಪಶು ಸಖಿಯರು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿ ಜಾಗೃತಿ ಮೂಡಿಸಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಮಲ್ ಷಾ, ಅಲ್ತಾಫ್ ಅಹಮದ್, ಪೌರಾಯುಕ್ತ ಮಹಾಂತೇಶ್ ಹಂಗರಗಿ, ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ. ನಾಯಕ್ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


