-->
 ನಾಟಕಗಳ ಯಶಸ್ವಿಗೆ ಸದಾಭಿರುಚಿಯ ಪ್ರೇಕ್ಷಕರು ಅಗತ್ಯ- ಡಾ.ತಲ್ಲೂರು ಶಿವರಾಮ ಶೆಟ್ಟಿ

ನಾಟಕಗಳ ಯಶಸ್ವಿಗೆ ಸದಾಭಿರುಚಿಯ ಪ್ರೇಕ್ಷಕರು ಅಗತ್ಯ- ಡಾ.ತಲ್ಲೂರು ಶಿವರಾಮ ಶೆಟ್ಟಿ


ಆಧುನಿಕ ಕಾಲಘಟ್ಟದಲ್ಲಿ ಇಂಟರ್‌ನೆಟ್‌ನಲ್ಲಿ ಮುಳುಗಿರುವ ಜನರನ್ನು ನಾಟಕದತ್ತ ಸೆಳೆಯುವುದು ಸುಲಭ ಸಾಧ್ಯವಲ್ಲ. ಇದು ಉತ್ತಮ ನಾಟಕಗಳಿಂದ ಮಾತ್ರ ಸಾಧ್ಯ. ಆದರೆ ಈ ಉತ್ತಮ ನಾಟಕಗಳು ಸದಾಭಿರುಚಿಯ ಪ್ರೇಕ್ಷಕರಿಂದ ಮಾತ್ರ ಯಶಸ್ವಿಯಾಗಬಲ್ಲವು ಎಂದು ರಂಗಭೂಮಿ ಉಡುಪಿ ಅಧ್ಯಕ್ಷ, ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. 

ಮಣಿಪಾಲದ ಗುರುವಸಂತಿ ಸಾಂಸ್ಕೃತಿಕ ವೇದಿಕೆಯ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಅಧ್ಯಕ್ಷ ಜಯರಾಮ ಮಣಿಪಾಲ ಅವರ ಸಾರಥ್ಯದಲ್ಲಿ ಹಮ್ಮಿಕೊಂಡ ಪರ್ಕಳದ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಮೂರು ದಿನಗಳ ಕಾಲ ನಡೆದ ನಾಟಕೋತ್ಸವ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಟಕಗಳು ಸಮಾಜದ ಜೀವಂತಿಕೆಯ ಸಾಕ್ಷಿಪ್ರಜ್ಞೆಯಾಗಿವೆ. ಸಾಮಾಜಿಕ ಸಂದೇಶವನ್ನು ಸಾರುವ ಕಥಾಹಂದರಗಳನ್ನು ಒಳಗೊಂಡಿರುವ ನಾಟಕಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದ ಅವರು ರಂಗಭೂಮಿ ಉಡುಪಿ ವತಿಯಿಂದ ಪ್ರದರ್ಶಿಸಲ್ಪಟ್ಟ 'ಕಾಲಚಕ್ರ' ನಾಟಕವನ್ನು ಉದಾಹರಿಸಿದರು. ನಾಟಕಗಳಾಗಲಿ, ಸಿನೆಮಾಗಳಾಗಲಿ ಬರೀ ಮನರಂಜನೆಯ ದೃಷ್ಟಿಯನ್ನಿಟ್ಟುಕೊಂಡು ಪ್ರದರ್ಶನಗೊಂಡರೆ ಅದರಿಂದ ಸಮಾಜಕ್ಕೆ ಉಪಯೋಗವಾಗದು. ಸಾಮಾಜಿಕ ಸಂದೇಶವನ್ನು ಯುವ ಪೀಳಿಗೆಗೆ ಮುಟ್ಟಿಸುವ ನಾಟಕಗಳು ಇಂದಿನ ಅಗತ್ಯವಾಗಿವೆ ಎಂದು ಅವರು ಅಭಿಪ್ರಾಯಪಟ್ಟರು.

ಕಲಾವಿದ ಜಯರಾಮ ಮಣಿಪಾಲ ಅವರು ತಮ್ಮ ತಂದೆತಾಯಿ ಹೆಸರಲ್ಲಿ ಗುರುವಸಂತಿ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟುಹಾಕಿ ಆ ಮೂಲಕ ನಾಟಕೋತ್ಸವವನ್ನು ಆಯೋಜಿಸಿ ಸಮಾಜಕ್ಕೆ ತಂದೆತಾಯಿಯರ ಮಹತ್ವವನ್ನು ಸಾರುವ ಕೆಲಸ ಮಾಡುತ್ತಿರುವುದು ಅಭಿನಂದನೀಯ. ಮಕ್ಕಳಲ್ಲಿ ನೈತಿಕ ಪ್ರಜ್ಞೆಯನ್ನು ಬಾಲ್ಯದಲ್ಲಿಯೇ ಬೆಳೆಸಿದರೆ ಅವರು ಬೆಳೆದಂತೆ ತಂದೆ ತಾಯಿ, ಗುರುಹಿರಿಯರಿಗೆ ಪ್ರೀತಿ, ಗೌರವವನ್ನು ಕೊಡುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ನಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಯಕ್ಷ ಶಿಕ್ಷಣ ಆರಂಭಿಸಲಾಯಿತು. ಅದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ. ಇಂದು ಏನಿಲ್ಲವೆಂದರೂ ಸುಮಾರು 3,500ಕ್ಕೂ ಅಧಿಕ ಮಕ್ಕಳು ಯಕ್ಷಗಾನವನ್ನು ಕಲಿಯುತ್ತಿದ್ದಾರೆ. ನಮ್ಮ ಪುರಾಣದ ಕಥೆಗಳು, ನೈತಿಕ ಮೌಲ್ಯಗಳನ್ನು ಈ ರೀತಿಯ ಕಲೆಯ ಮೂಲಕ ಮಕ್ಕಳ ಮನಸ್ಸಲ್ಲಿ ಬಿತ್ತಲಾಗುತ್ತಿದೆ. ಇದೇ ಮಾದರಿಯಲ್ಲಿ ಇದೀಗ ರಂಗಭೂಮಿ ಉಡುಪಿ ವತಿಯಿಂದ ಕಳೆದ ಎರಡು ವರ್ಷಗಳಲ್ಲಿ ನಾಟಕವನ್ನು ಕಲಿಸುವ ರಂಗಶಿಕ್ಷಣವನ್ನು ನೀಡಲಾಗುತ್ತಿದೆ. ಈ ಬಾರಿ ಸುಮಾರು 12 ಶಿಕ್ಷಣ ಸಂಸ್ಥೆಗಳಲ್ಲಿ ಈ ತರಬೇತಿ ನಡೆದಿದೆ. ತರಬೇತಿ ಪಡೆದ ಮಕ್ಕಳಿಂದ ನಾಟಕೋತ್ಸವ ಕೂಡಾ ನಡೆದಿದೆ. ಮುಂದೆ ಜಾನಪದವನ್ನು ಕೂಡಾ ಶಾಲೆಗಳಲ್ಲಿ ಪ್ರಾರಂಭಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ. ಇದಕ್ಕೆಲ್ಲಾ ಸಮಾಜದ ಪ್ರೋತ್ಸಾಹದ ಅಗತ್ಯವಿದೆ. ಸಮಾಜ, ಸಂಘಸoಸ್ಥೆಗಳು ಕೈ ಜೋಡಿಸಿದರೆ ಮಹತ್ತರವಾದುದ್ದನ್ನು ಸಾಧಿಸಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕಲಾವಿದ ಸುಂದರ ನಂದ್ಯಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪರ್ಕಳದ ಸುರಕ್ಷಾ ಸಭಾಭವನದ ರಾಮಮೂರ್ತಿ ಭಟ್, ರೋಟರಿ ಮಾಜಿ ಗವರ್ನರ್ ಬಿ.ರಾಜಾರಾಮ ಭಟ್, ನಿವೃತ್ತ ಬ್ಯಾಂಕ್ ಅಧಿಕಾರಿ ವಿಠಲ ಶೆಟ್ಟಿಗಾರ್ ಸಗ್ರಿ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮಂಗಳೂರು ಇದರ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಳ, ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಪರ್ಕಳ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆ, ಕಾರ್ಯಕ್ರಮದ ರೂವಾರಿ ಜಯರಾಮ ಮಣಿಪಾಲ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಕರ ಮಣಿಪಾಲ್ ರಚಿಸಿ, ನಟಿಸಿ, ನಿರ್ದೇಶಿಸಿರುವ  'ಅರ್ಬುದಾ - ಪುಣ್ಯಕೋಟಿ ' ಜಾನಪದ ನಾಟಕದ ಪ್ರದರ್ಶನ ನಡೆಯಿತು.

Ads on article

Advertise in articles 1

advertising articles 2

Advertise under the article