ಫೆ. 21: "ಕುದ್ರೋಳಿ ತೀರ್ಥಾಟನೆ" ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ ಪಾದಯಾತ್ರೆ
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ವಿವಿಧ ಬಿಲ್ಲವ ಸಂಘಟನೆಗಳ ಸಹಯೋಗದಲ್ಲಿ "ಕುದ್ರೋಳಿ ತೀರ್ಥಾಟನೆ" ನಮ್ಮ ನಡಿಗೆ ಶ್ರೀ ಗುರುವಿನೆಡೆಗೆ ಪಾದಯಾತ್ರೆಯು ಫೆ. 21ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಕ್ಷೇತ್ರದ ಪ್ರತಿನಿಧಿ ಜಯಾನಂದ್ ತಿಳಿಸಿದ್ದಾರೆ. ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬೆಳಗ್ಗೆ 9 ಗಂಟೆಗೆ ಸೆಂಟ್ರಲ್ ರೈಲ್ವೇ ನಿಲ್ದಾಣದಿಂದ ಆರಂಭಗೊಳ್ಳುವ ತೀರ್ಥಾಟನೆಯು ನಗರದಲ್ಲಿ ಸುಮಾರು 7 ಕಿ.ಮೀ.ಗಳ ನಡಿಗೆಯ ಮೂಲಕ 11 ಗಂಟೆಗೆ ಕುದ್ರೋಳಿ ಕ್ಷೇತ್ರವನ್ನು ತಲುಪಲಿದೆ. ಗುರು ಪ್ರಾರ್ಥನೆಯೊಂದಿಗೆ ಆರಂಭಗೊಳ್ಳುವ ಈ ತೀರ್ಥಾಟನೆಯು ಕ್ಷೇತ್ರ ತಲುಪಿದ ಬಳಿಕ ಬಿಲ್ವ ಪತ್ರಾರ್ಚನೆ ಹಾಗೂ ಸ್ವಾಮೀಜಿಗಳ ಆಶೀರ್ವಚನದೊಂದಿಗೆ ಕೊನೆಗೊಳ್ಳಲಿದೆ ಎಂದರು.
ಹಿOದುಳಿದ ಸಮುದಾಯಗಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳು 1912 ಫೆ. 21ರಂದು ಶಿವಲಿಂಗ ಪ್ರತಿಷ್ಠಾಪನೆಯ ಮೂಲಕ ಕುದ್ರೋಳಿ ಕ್ಷೇತ್ರದಲ್ಲಿ ಕ್ರಾಂತಿಗೆ ನಾಂದಿ ಹಾಡಿದ್ದರು. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಮೂಲಕ ಕುದ್ರೋಳಿ ಕ್ಷೇತ್ರಕ್ಕೆ ನಾರಾಯಣ ಗುರುಗಳು ಭೇಟಿ ನೀಡಿದ್ದರ ಸಂಕೇತವಾಗಿ ‘ನಮ್ಮ ನಡಿಗೆ- ಶ್ರೀ ಗುರುವಿನೆಡೆಗೆ’ ಎಂಬ ಹೆಸರಿನಲ್ಲಿ ನಡೆಯಲಿರುವ ತೀರ್ಥಾಟನೆಗೆ ರೈಲ್ವೇ ನಿಲ್ದಾಣದಲ್ಲೇ ಚಾಲನೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ತೊಂದರೆ ಆಗದ ದೃಷ್ಟಿಯಿಂದ ರೈಲ್ವೇ ನಿಲ್ದಾಣದಲ್ಲಿ ಸುಮಾರು 200 ಮಂದಿಯಷ್ಟು ಗುರು ಅನುಯಾಯಿಗಳು ಸೇರಿಕೊಂಡು ಅಲ್ಲಿಂದ ನೆಹರೂ ಮೈದಾನಕ್ಕೆ ನಡಿಗೆ ಬರಲಿದೆ. ಅಲ್ಲಿ ಇತರ ಕಡೆಗಳಿಂದ ಬರುವ ಗುರುಗಳ ಅನುಯಾಯಿಗಳ ಜತೆಯಲ್ಲಿ ಸಾಗುವ ತೀರ್ಥಾಟನೆ ನಡಿಗೆ ಕ್ಲಾಕ್‌ಟವರ್, ನವಭಾರತ ಸರ್ಕಲ್, ಪಿವಿಎಸ್, ಲೇಡಿಹಿಲ್ ಮೂಲಕ ಕ್ಷೇತ್ರಕ್ಕೆ ತಲುಪಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಟಿಯಲ್ಲಿ ಬಿಲ್ಲವ ಸಂಘಟನೆಗಳ ಪ್ರಮುಖರಾದ ಬಿ.ಎನ್ ಶಂಕರ ಪೂಜಾರಿ, ಹಿರಿಯ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ರಘುನಾಥ ಹಾಗೂ ಪ್ರತಾಪ್ ಕುಮಾರ್ ಮೊದಲಾದವರು ಇದ್ದರು.