ಉದ್ಯಮಿಗೆ ಫ್ಲ್ಯಾಟ್, ಚಿನ್ನದ ವ್ಯವಹಾರದಲ್ಲಿ ಕೋಟಿ ವಂಚನೆ; ಉಡುಪಿ ಮೂಲದ ದಂಪತಿ ವಿರುದ್ಧ ಪ್ರಕರಣ
ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನದ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿಗೆ ಸುಮಾರು 4.78 ಕೋಟಿ ರೂ. ವಂಚನೆ ನಡೆಸಿರುವ ಆರೋಪ ಉಡುಪಿಯ ದಂಪತಿ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಸುಹಾಸಿನಿ ಶೆಟ್ಟಿ ಹಾಗೂ ಅವರ ಪತಿ ಪುನೀತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಎರಡು ವರ್ಷಗಳಲ್ಲಿ ಹಂತ ಹಂತವಾಗಿ ವಂಚನೆ ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ, 2024ರ ಜನವರಿಯಿಂದ ಜೂನ್‌ವರೆಗೆ ಹಂತ ಹಂತವಾಗಿ 4.78 ಕೋಟಿ ರೂ. ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಹಾಗೂ ಸ್ಕ್ರಾಪ್ ವ್ಯವಹಾರದಲ್ಲಿ ಲಾಭಕರ ಹೂಡಿಕೆ ಮಾಡಿಕೊಡುವುದಾಗಿ ಭರವಸೆ ನೀಡಿ ಹಣ ಪಡೆದುಕೊಂಡಿದ್ದರೂ, ನಂತರ ಯಾವುದೇ ಆಸ್ತಿಯನ್ನೂ ಖರೀದಿಸಿ ಕೊಡದೆ ವಂಚನೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಈ ಬಗ್ಗೆ 2024ರಲ್ಲಿ ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಪ್ರಕರಣಕ್ಕೆ ಸ್ಟೇ ಆದೇಶ ಪಡೆದಿದ್ದರು ಎನ್ನಲಾಗಿದೆ. ನಂತರ ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಎನ್ನುವವರ ಮೂಲಕ ಸಂಧಾನ ಮಾತುಕತೆ ನಡೆದಿದ್ದರೂ ಅದು ವಿಫಲವಾಗಿದೆ. ಇದೀಗ ಸುಹಾಸಿನಿ ಮತ್ತು ಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡ ಹಿನ್ನೆಲೆ, ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮರು ತನಿಖೆಗೆ ಮನವಿ ಮಾಡಿದ್ದಾರೆ. ಪ್ರಕರಣವನ್ನು ಮರು ಪರಿಶೀಲಿಸುವುದಾಗಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಭರವಸೆ ನೀಡಿದ್ದಾರೆ.