ಹುಡುಗರೇ ಮದುವೆಗೆ ಜಾತಕ ಮುಖ್ಯ ಅಲ್ಲ; ಸಿಬಿಲ್ ಸ್ಕೋರ್ ಚೆನ್ನಾಗಿರಲಿ..!
ಇತ್ತೀಚೆಗೆ ಸಣ್ಣ ಪುಟ್ಟ ಘಟನೆಗಳಿಗೆ ಹಸೆಮಣೆ ಏರಲು ಸಜ್ಜಾದ ಮದುವೆಗಳು ರದ್ದಾಗುವುದು ಸರ್ವೇಸಾಮಾನ್ಯ ಎಂಬಂತಾಗಿದೆ. ಮಹಾರಾಷ್ಟçದಲ್ಲೊಂದು ವಿಚಿತ್ರ ಘಟನೆಗೆ ಮದುವೆಯೇ ಮುರಿದು ಬಿದ್ದಿದೆ.
ದಾಂಪತ್ಯ ಬದುಕಿಗೆ ಕಾಲಿಡುವ ಸಂಭ್ರಮದಲ್ಲಿದ್ದ ವರನಿಗೆ ಆತನ ಸಿಬಿಲ್ ಸ್ಕೋರ್ ಶತ್ರುವಾಗಿ ಕಾಡಿದೆ. ಮಹಾರಾಷ್ಟçದ ಮುರ್ತಿಜಾಪುರದಲ್ಲಿ ಈ ಘಟನೆ ವರದಿಯಾಗಿದೆ. ಮದುವೆಯನ್ನು ಎರಡೂ ಕುಟುಂಬಗಳು ಪರಸ್ಪರ ಒಪ್ಪಿಗೆಯಿಂದಲೇ ನಿರ್ಧಾರ ಮಾಡಿತ್ತು. ಮದುವೆ ದಿನಾಂಕವನ್ನು ಕೂಡಾ ನಿಗದಿ ಮಾಡಲಾಗಿತ್ತು. ಆದರೆ ಅದೇನು ಯುವಕನ ಗ್ರಹಚಾರ ಕೆಟ್ಟಿದೆಯೋ ಗೊತ್ತಿಲ್ಲ. ಯುವತಿಯ ಚಿಕ್ಕಪ್ಪ ಹುಡುಗನ ಸಿಬಿಲ್ ಸ್ಕೋರ್ ಪರಿಶೀಲನೆಗೆ ಒತ್ತಾಯಿಸಿದ್ದಾರೆ. ಹೀಗಾಗಿ ವರನ ಸಿಬಿಲ್ ಸ್ಕೋರ್ ಪರಿಶೀಲಿಸಿದ ವಧುವಿನ ಕುಟುಂಬಕ್ಕೆ ಆಘಾತವಾಗಿದೆ.
ಮದುವೆಯಾಗುವ ಹುಡುಗ ವಿವಿಧ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುವುದನ್ನು ನೋಡಿ ಮಹಿಳೆಯ ಕುಟುಂಬ ಆಘಾತಕ್ಕೊಳಗಾಗಿದೆ. ಇದರಿಂದ ಸಿಬಿಲ್ ಸ್ಕೋರ್ ಕಡಿಮೆಯಾಗಿರುವುದು ಗೊತ್ತಾಗಿದೆ. ಸರಿಯಾಗಿ ಲೋನ್ ವಾಪಸ್ ಕಟ್ಟದೇ ಇದ್ದರೆ ಸಿಬಿಲ್ ಸ್ಕೋರ್ ಕಡಿಮೆಯಾಗುತ್ತದೆ.
ಸಾಲದ ಹೊರೆ ಹೊಂದಿರುವ ವ್ಯಕ್ತಿಯು ತಮ್ಮ ಮಗಳಿಗೆ ಆರ್ಥಿಕ ಭದ್ರತೆ ನೀಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಕುಟುಂಬಸ್ಥರು ಮದುವೆಯನ್ನು ರದ್ದುಗೊಳಿಸಿದ್ದಾರೆ. ಈ ವಿಶಿಷ್ಟ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿದ್ದು, ಸಿಬಿಲ್ ಸ್ಕೋರ್ ಆಧುನಿಕ ಮದುವೆಯ ಹೊಸ ಜಾತಕ ಎಂದು ನೆಟ್ಟಿಗರು ಕರೆದಿದ್ದಾರೆ. ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ತಲೆಕೆಡಿಸಿಕೊಳ್ಳುತ್ತಿರುವ ಹುಡುಗರೇ ಇನ್ನು ಮದುವೆಯಾಗಬೇಕಾದರೆ ಜಾತಕ ಹೊಂದಾಣಿಕೆ ಜೊತೆ ಸಿಬಿಲ್ ಸ್ಕೋರನ್ನೂ ನೆಟ್ಟಗೇ ಇಟ್ಟುಕೊಳ್ಳಿ ಎಂದು ನೆಟ್ಟಿಗರು ಸಲಹೆ ನೀಡುತ್ತಿದ್ದಾರೆ.