ಚಿಟ್ಟಿಬೆಟ್ಟುವಿನಲ್ಲಿ ಕೊರಗ ಸಮುದಾಯಕ್ಕೆ 8 ಮನೆಗಳ ಹಸ್ತಾಂತರ
ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಟ್ಟಿಬೆಟ್ಟು ಪ್ರದೇಶದಲ್ಲಿ ಹಲವು ದಶಕಗಳಿಂದ ಶೋಚನೀಯ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದ ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಕುಟುಂಬಗಳಿಗೆ ದಾನಿಗಳ ಸಹಕಾರದಿಂದ ನಿರ್ಮಿಸಲಾದ ಎಂಟು ನೂತನ ಮನೆಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಮನೆಗಳನ್ನು ಫಲಾನುಭವಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮನೆ ಹಸ್ತಾಂತರ ಕಾರ್ಯಕ್ರಮವನ್ನು ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಗಳು ಉದ್ಘಾಟಿಸಿದರು. ನಂತರ ಆಶಿರ್ವಚನ ನೀಡಿ, ಕೃಷ್ಣನು ಬಯಸಿದಾಗ ಕುಚೇಲನು ತಂದ ಅವಲಕ್ಕಿಯಿಂದ ಅವನ ಮನೆ ಅರಮನೆಯಾಗಿ ಬದಲಾಯಿತು. ಅದೇ ರೀತಿ ಶ್ರೀಕೃಷ್ಣನ ಅನುಗ್ರಹದಿಂದ ಭಕ್ತರ ಬದುಕು ಬಂಗಾರವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ, ಗ್ರಾಮ ಪಂಚಾಯತ್ ಈ ಮಟ್ಟಿನ ಸಮಾಜಮುಖಿ ಯೋಜನೆ ಕೈಗೊಂಡಿರುವುದು ಶ್ಲಾಘನೀಯ. ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲಾ ದಾನಿಗಳ ಸಹಕಾರ ಅನನ್ಯವಾಗಿದೆ ಎಂದರು.
ಖ್ಯಾತ ಚಿತ್ರನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಕೊರಗ ಸಮುದಾಯ ನಮ್ಮದೇ ಸಮುದಾಯವೆನ್ನುವಷ್ಟು ಹತ್ತಿರವಾಗಿದೆ. ವಿಶ್ವಮಟ್ಟದಲ್ಲಿ ಗಮನ ಸೆಳೆದ ಕಾಂತಾರ ಚಿತ್ರದ ಹಿನ್ನಲೆ ಡೋಲು ಸಂಗೀತ ನೀಡಿದವರು ಇದೇ ಸಮುದಾಯದ ಕಲಾವಿದರು. ಸಮಾಜಕ್ಕೆ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿರಣ್ ಕುಮಾರ್ ಕೊಡ್ಗಿ ವಹಿಸಿದ್ದರು. ಇದೇ ವೇದಿಕೆಯಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಧನಸಹಾಯ ನೀಡಿದ ದಾನಿಗಳನ್ನು ಪುತ್ತಿಗೆ ಶ್ರೀಗಳು ಗೌರವಿಸಿ ಅಭಿನಂದಿಸಿದರು. ವೇದಿಕೆಯಲ್ಲಿ ಉದ್ಯಮಿ ಡಾ. ಎಚ್. ಎಸ್. ಶೆಟ್ಟಿ, ಆನಂದ ಸಿ. ಕುಂದರ್, ಜಿ. ಶಂಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
.jpeg)