ಹೆಚ್ಚಿದ ಬಿಸಿಲ ತಾಪ; ಎಳನೀರಿಗೆ ಭಾರೀ ಡಿಮ್ಯಾಂಡ್, ಬೆಲೆಯೂ ಬಲು ದುಬಾರಿ..!
Tuesday, February 24, 2026
ಬೇಸಿಗೆಯ ಆರಂಭದಲ್ಲೇ ಸುಡು ಬಿಸಿಲಿಗೆ ಜನ ಹೈರಾಣಾಗಿದ್ದು, ಜನರು ದಾಹ ತಣಿಸಿಕೊಳ್ಳಲು ನೈಸರ್ಗಿಕ ಪಾನೀಯವಾದ ಎಳನೀರಿನ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಾದಂತೆ ಎಳನೀರಿನ ಬೆಲೆಯೂ ಗಗನಕ್ಕೇರಿದೆ.
ಪ್ರತೀಬಾರಿ ಮಾರ್ಚ್ ತಿಂಗಳಲ್ಲಿ ಬಿಸಿಲ ತಾಪ ಹೆಚ್ಚಾಗುತ್ತಿತ್ತು. ಆದರೆ ಫೆಬ್ರವರಿಯಲ್ಲೇ ಬಿಸಿಲ ಝಳಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಹೀಗಾಗಿ ಜನ ದೇಹ ತಂಪಾಗಿಸಲು ನೈಸರ್ಗಿಕ ಪಾನೀಯಗಳತ್ತ ಮುಖಮಾಡಿದ್ದಾರೆ. ಬಿಸಿಲಿನ ತಾಪದಿಂದಾಗಿ ಆರೋಗ್ಯ ಸಮಸ್ಯೆ ಕೂಡಾ ತಲೆದೋರಿರುವುದರಿಂದ ಜನರು ಎಳನೀರಿನ ಮೊರೆ ಹೋಗಿದ್ದಾರೆ. ಆದರೆ ಎಳನೀರಿನ ಬೆಲೆ ಗಗನಕ್ಕೇರಿರುವುದರಿಂದ ಗ್ರಾಹಕರಿಗೆ ತೊಂದರೆಯಾಗಿದೆ.
ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ಇಳುವರಿ ಕೊರತೆಯಿಂದಾಗಿ ರಾಜ್ಯದಲ್ಲಿ ಎಳನೀರು ದೊರಕುತ್ತಿಲ್ಲ. ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ದೂರದ ತಮಿಳುನಾಡಿನಿಂದ ಎಳನೀರು ಖರೀದಿಸಿ ಮಾರಾಟ ಮಾಡಲಾಗುತ್ತಿದ್ದು, ಒಂದು ಎಳನೀರು ಬೆಲೆ 70ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ.
ತಮಿಳುನಾಡಿನಿಂದ ಸುಮಾರು 60 ರೂಪಾಯಿ ನೀಡಿ ಗೆಂದಾಲಿ ತಳಿಯ ಎಳನೀರು ಖರೀಸುತ್ತೇವೆ. ದಿನಕ್ಕೆ 100ರಿಂದ 50 ಸಿಯಾಳ ಮಾರಾಟವಾಗುತ್ತಿದೆ. ಕಳೆದ 10 ದಿನಗಳಿಂದ ಗ್ರಾಹಕರ ಸಂಖ್ಯೆ ಹೆಚ್ಚಿದೆ. ಮಧ್ಯಾಹ್ನ ಗ್ರಾಹಕರು ಹೆಚ್ಚು ಬರುತ್ತಿದ್ದು, ಬೆಲೆ ಏರಿಕೆಯ ನಡುವೆಯೂ ಸಿಯಾಳ ಖರೀದಿಸುವವರ ಸಂಖ್ಯೆ ಹೆಚ್ಚುತ್ತಿದೆ ಎನ್ನುತ್ತಾರೆ ಉಡುಪಿಯ ವ್ಯಾಪಾರಿ ನವೀನ್ ಅವರು. ಉಡುಪಿಯ ಬಲೈಪಾದೆ ಸಮೀಪ ತಾನು ಕಳೆದ ಎರಡು ವರ್ಷಗಳಿಂದ ಎಳನೀರು ವ್ಯಾಪಾರ ಮಾಡುತ್ತಿದ್ದೇನೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಸಿಲಿ ತಾಪ ಹೆಚ್ಚಿದ್ದು, ಸಿಯಾಳಕ್ಕೆ ಬೇಡಿಕೆಯೂ ಹೆಚ್ಚಾಗಿದೆ ಎಂದು ವ್ಯಾಪಾರಿ ನವೀನ್ ಅವರು ತಿಳಿಸಿದ್ದಾರೆ.
ಮಳೆಗಾಲದಲ್ಲೇ 50 ರೂಪಾಯಿ ಇದ್ದ ಎಳನೀರು ಬೇಸಿಗೆಯ ಆರಂಭದಲ್ಲೇ 80 ರೂಪಾಯಿಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ 100ರ ಗಡಿ ದಾಟಲಿದೆಯಾ ಎನ್ನುವ ಆತಂಕವನ್ನು ಗ್ರಾಹಕರು ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಬಿರು ಬಿಸಿಲಿನಷ್ಟೇ ಎಳನೀರಿನ ಬೆಲೆಯೂ ಗ್ರಾಹಕನ ಜೇಬು ಸುಡುತ್ತಿದೆ.

