-->
 ರೈತರಿಗೆ ಮಣ್ಣು ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ರೈತರಿಗೆ ಮಣ್ಣು ಸಾಗಾಣಿಕೆಯಲ್ಲಿ ತೊಂದರೆಯಾಗದಂತೆ ಕ್ರಮವಹಿಸಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ


ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಜಮೀನಿನ ಮಣ್ಣನ್ನು ಸಾಗಾಣಿಕೆ ಮಾಡುತ್ತಿರುವ ವೇಳೆ ಅನಗತ್ಯ ತೊಂದರೆಗಳು ಉಂಟಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸಿ, ರೈತರಿಗೆ ಯಾವುದೇ ರೀತಿಯ ಅಡಚಣೆ ಆಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.


ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಣ್ಣು ಸಾಗಾಣಿಕೆ ಮಾಡುವಾಗ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ರೈತರು ತಮ್ಮ ಖಾಸಗಿ ಜಮೀನಿನಿಂದ ಮಣ್ಣನ್ನು ತೆಗೆದುಕೊಂಡು ಮತ್ತೊಂದು ಕೃಷಿ ಜಮೀನಿಗೆ ಬಳಸುತ್ತಾ ಬಂದಿದ್ದಾರೆ. ಈ ಮಣ್ಣನ್ನು ಯಾವುದೇ ಅನ್ಯ ಉದ್ದೇಶಕ್ಕೆ ಬಳಸಲಾಗುತ್ತಿಲ್ಲ. ಆದ್ದರಿಂದ ನಿಯಮಾನುಸಾರವಾಗಿ ರೈತರಿಗೆ ತೊಂದರೆ ಉಂಟಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕೆಲವರು ತಮ್ಮ ಸ್ವಾರ್ಥಕ್ಕಾಗಿ ರೈತರು ಮಣ್ಣು ಸಾಗಾಟ ಮಾಡುತ್ತಿರುವ ಕುರಿತು ದೂರುಗಳನ್ನು ನೀಡುತ್ತಾರೆ. ಇಂತಹ ದೂರುಗಳನ್ನು ಅತಿಯಾಗಿ ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟರು. 

ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಮಣ್ಣು ಸಾಗಾಟ ಲಾರಿಗಳಿಂದ ಎರಡು ಅಪಘಾತ ಪ್ರಕರಣಗಳು ನಡೆದ ನಂತರ ಈ ಸಂಬಂಧ ದೂರುಗಳು ಹೆಚ್ಚಾಗಿವೆ. ಆದರೆ ಅದಕ್ಕೂ ಮೊದಲು ಕಳೆದ ಒಂದು ವರ್ಷದಿಂದ ಇಂತಹ ದೂರುಗಳು ಬಂದಿರಲಿಲ್ಲ. ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದು ಸೂಕ್ತ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಶಾಸಕರಾದ ಯಶ್‌ಪಾಲ್ ಎ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಂಧ್ಯ ಎನ್.ಎಮ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article