ಸಹಜ ಸೌಂದರ್ಯದ ಒಡಲು ಹೂಡೆಯ ಸ್ವಚ್ಛಂದ ಕಡಲು...! (Video)
Tuesday, February 03, 2026
ತಿಳಿ ನೀರ ಕಡಲು, ಹೊಂಬಣ್ಣದ ಮರಳು, ಕಚಗುಳಿಯಿಡುವ ಶುದ್ಧ ತಂಗಾಳಿ ಹೀಗೆ ಪ್ರಶಾಂತತೆ ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಏಕಾಂತ ಕಡಲತೀರವೊಂದಿದೆ. ಅದುವೇ ಉಡುಪಿ ಜಿಲ್ಲೆಯ ಹೂಡೆ ಬೀಚ್. ಉಡುಪಿ ನಗರದಿಂದ ಸುಮಾರು 18 ಕಿಮೀ ದೂರದಲ್ಲಿರುವ ಈ ತಾಣ, ಶಾಂತತೆಯಿಂದ ಪ್ರಕೃತಿ ಸೌಂದರ್ಯವನ್ನು ಸವಿಯುವವರ ಸ್ವರ್ಗ ಎಂದರೆ ತಪ್ಪಲ್ಲ. ಹೆಚ್ಚೇನೂ ಅಭಿವೃದ್ಧಿ ಕಾಣದ ಹೂಡೆ ಬೀಚ್ ಇತ್ತೀಚೆಗೆ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಬೀಚ್ ಎಂದಾಗ ಅಲ್ಲಿ ಕಿಕ್ಕಿರಿದ ಜನ ಸಂದಣಿ ಸಾಮಾನ್ಯ. ಏಕಾಂತ ಸವಿಯಲು ಬಂದವರಿಗೆ ಈ ಕಿಕ್ಕಿರಿದ ಜನ ಸಂದಣಿಯೇ ಕಿರಿಕಿರಿ ಮಾಡುತ್ತದೆ. ಹಾಗಾಗಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಹೂಡೆ ಬೀಚ್‌ನತ್ತ ಈಗ ಪ್ರವಾಸಿಗರು ಮುಖ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಸ್ಥಳೀಯರಷ್ಟೇ ಕಾಣ ಸಿಗುತ್ತಿದ್ದ ಹೂಡೆ ಬೀಚ್ ಇತ್ತೀಚೆಗೆ ಪ್ರವಾಸಿಗರಿಗೆ ಇನ್ನಷ್ಟು ತೆರೆದುಕೊಂಡಿದೆ. ಹಾಗಾಗಿ ಪ್ರವಾಸಿಗರ ಅನುಕೂಲತೆಗೆ ತಕ್ಕಂತೆ ಬೀಚ್ ಹೌಸ್ ಗಳು, ರೆಸಾರ್ಟ್ ಗಳು ತಲೆ ಎತ್ತುತ್ತಿವೆ. ಬಗೆ ಬಗೆಯ ಸೀ ಫುಡ್ ಸ್ಟಾಲ್ ಗಳು, ತಂಪಾದ ಪಾನೀಯಗಳು, ಕರಾವಳಿಯ ಮೀನಿನ ಖಾದ್ಯಗಳು ಇಲ್ಲಿ ಲಭ್ಯವಿದೆ. ಹೀಗಾಗಿ ಪ್ರಶಾಂತ ವಾತಾವರಣದಲ್ಲಿ ಒಳ್ಳೇಯ ಸೀ ಫುಡ್ ಸವಿಯಲೆಂದೇ ಬರುವವರಿದ್ದಾರೆ. ಸಂಜೆಯಾಗುತ್ತಲೇ ಪ್ರವಾಸಿಗರು ಸೂರ್ಯಾಸ್ತಮಾನದ ಸೌಂದರ್ಯ ಸವಿಯಲೆಂದು ಬರುತ್ತಾರೆ.
ಕಿಕ್ಕಿರಿದ ಜನಸಂದಣಿಯಿಂದ ದೂರವಿದ್ದು, ಬಿಳಿ ಮರಳು, ತೆಂಗಿನ ಮರಗಳು ಮತ್ತು ಸುಂದರವಾದ ಸೂರ್ಯಾಸ್ತದ ನೋಟದಿಂದ ಈ ಹೂಡೆ ಬೀಚ್ ಜನಪ್ರಿಯವಾಗಿದೆ. ಬೀಚ್ ವಾಕಿಂಗ್, ಈಜು, ವಿಶ್ರಾಂತಿಗೆ ಹೂಡೆ ಬೀಚ್ ಸೂಕ್ತ ಸ್ಥಳವಾಗಿದೆ. ಹೂಡೆ ಬೀಚ್ ಗೆ ಬಂದವರು ಹತ್ತಿರದಲ್ಲೇ ಇರುವ ಡೆಲ್ಟಾ ಬೀಚ್ ಮತ್ತು ಕದಿಕೆ ಬೀಚ್ ಸೌಂದರ್ಯವನ್ನೂ ಸವಿಯಬಹುದು.
ನಯನ ಮನೋಹರ ಪ್ರಕೃತಿ ಸೌಂದರ್ಯ ಹೆಸರುವಾಸಿಯಾದ ಹೂಡೆ ಬೀಚ್ ನಲ್ಲಿ ಈಜಲು ಇಳಿಯುವಾಗ ಎಚ್ಚರಿಕೆ ಅವಶ್ಯಕತೆ ಇದೆ. ಏಕೆಂದರೆ ಇಲ್ಲಿ ಲೈಫ್ ಗಾರ್ಡ್ ಇಲ್ಲದಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ.
ಅಕ್ಟೋಬರ್‌ನಿಂದ ಮಾರ್ಚ್ ವರೆಗೆ ಹವಾಮಾನವು ಆಹ್ಲಾದಕರವಾಗಿರುತ್ತದೆ, ಆದರೆ ಸಂಜೆಯ ಸೂರ್ಯಾಸ್ತದ ವೀಕ್ಷಣೆಗೆ ಯಾವುದೇ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡಬಹುದು. ಹೂಡೆ ಬೀಚ್ ಪ್ರಕೃತಿಯ ಮಡಿಲಿನಲ್ಲಿ ಸ್ವಲ್ಪ ಸಮಯ ಕಳೆಯಲು ಮತ್ತು ಒತ್ತಡದಿಂದ ಮುಕ್ತಿ ಪಡೆಯಲು ಪರಿಪೂರ್ಣ ತಾಣವಾಗಿದೆ.
.jpeg)
.jpeg)