ನಂಚಾರು ಕಾಮಧೇನು ಗೋಶಾಲೆ ಜಲಸಂಪರ್ಕಕ್ಕೆ 2.30 ಲಕ್ಷ ರೂ. ದೇಣಿಗೆ
Tuesday, February 03, 2026
ಉಡುಪಿ ನಂಚಾರು ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ನ ಗೋಶಾಲೆಗೆ ನೀರಿನ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಾದ ನೂಪುರ ಯಕ್ಷಸ್ಥಾನ ಟ್ರಸ್ಟ್, ವಂಡಾರು ವತಿಯಿಂದ 2 ಲಕ್ಷ 30 ಸಾವಿರ ರೂ. ದೇಣಿಗೆ ನೀಡಲಾಗಿದೆ. ಈ ದೇಣಿಗೆಯನ್ನು ಸಂಗ್ರಹಿಸುವ ಸಲುವಾಗಿ ಫೆ.1ರಂದು ಮೈರ್ ಕೊಮೆಯ ಸಪ್ತಪದಿ ಕನ್ವೆನ್ಷನ್ ಹಾಲ್‌ನಲ್ಲಿ ಶುಭಾಶಯ ಜೈನ್ ವಿರಚಿತ ಹನುಮ ಕಲ್ಯಾಣ ಯಕ್ಷಗಾನ ಪ್ರಸಂಗ ಪ್ರದರ್ಶನ ಆಯೋಜಿಸಲಾಗಿತ್ತು.
ವೇದಿಕೆಯಲ್ಲಿ ಗೋಶಾಲೆಗೆ ಮೊದಲ ಹಂತವಾಗಿ 1 ಲಕ್ಷ ರೂ. ದೇಣಿಗೆಯನ್ನು ಹಸ್ತಾಂತರಿಸಲಾಯಿತು. ಉಳಿದ 1.30 ಲಕ್ಷ ರೂ.ಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು ಘೋಷಿಸಿದರು.
ದೇಣಿಗೆಯನ್ನು ಸ್ವೀಕರಿಸಿ ಮಾತನಾಡಿದ ಗೋಶಾಲಾ ಟ್ರಸ್ಟ್ ಮುಖ್ಯಸ್ಥ ರಾಜೇಂದ್ರ ಚಕ್ಕೆರವರು, ಅನಾಥ ಗೋವುಗಳ ಸೇವೆಗೆ ನಾದ ನೂಪುರ ಯಕ್ಷಸ್ಥಾನ ಟ್ರಸ್ಟ್ ನೀಡಿದ ನೆರವು ಶ್ಲಾಘನೀಯ ಎಂದರು. ಕಲೆಯ ಮೂಲಕ ಗೋಸೇವೆಗೆ ಕೈಜೋಡಿಸಿರುವ ಗೋವಿಂದ ವಂಡಾರು ಅವರ ಸೇವೆ ಅಭಿನಂದನಾರ್ಹ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಗೋವಿಂದ ವಂಡಾರು ಮಾತನಾಡಿ, ಯಕ್ಷಗಾನ ಕಲೆಯ ಮೂಲಕ ಗೋಮಾತೆಗೆ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಸಂತಸದ ವಿಷಯ ಎಂದು ತಿಳಿಸಿದರು. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಪುಣ್ಯ ಲಭಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೋವಿಂದ ವಂಡಾರು ಅವರನ್ನು ಗೋಶಾಲಾ ಟ್ರಸ್ಟ್ ಹಾಗೂ ಊರಿನ ಗಣ್ಯರ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಲವು ಗಣ್ಯರು, ಯಕ್ಷಗಾನ ಪೋಷಕರು ಹಾಗೂ ಟ್ರಸ್ಟ್ ಸದಸ್ಯರು ಉಪಸ್ಥಿತರಿದ್ದರು.
.jpeg)
.jpeg)