-->
 ಅವಸಾನದ ಅಂಚಿಗೆ ತಲುಪಿದ ಶಿಲಾಯುಗದ ಶಿಲಾಗೋರಿಗಳು (Video)

ಅವಸಾನದ ಅಂಚಿಗೆ ತಲುಪಿದ ಶಿಲಾಯುಗದ ಶಿಲಾಗೋರಿಗಳು (Video)


ಉಡುಪಿ ಜಿಲ್ಲೆಯ ಒಂಡಾರು ವ್ಯಾಪ್ತಿಯ ಕಕ್ಕುಂಜೆ ಗಾವಳಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಸುಮಾರು ಮೂರೂವರೆ ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊತ್ತಿರುವ ಬೃಹತ್ ಶಿಲಾಯುಗದ ಶಿಲಾಗೋರಿಗಳು ಅವಸಾನದ ಅಂಚಿಗೆ ತಲುಪಿವೆ. 

ಈ ಪ್ರದೇಶದಲ್ಲಿ ಒಟ್ಟು ಐದು ಪ್ರಾಚೀನ ಶಿಲಾಗೋರಿಗಳು ಪತ್ತೆಯಾಗಿದ್ದು, ಅವುಗಳಲ್ಲಿ ಒಂದೇ ಶಿಲಾಗೋರಿ ಮಾತ್ರ ಸುಸ್ಥಿತಿಯಲ್ಲಿದೆ. ಉಳಿದ ನಾಲ್ಕು ಶಿಲಾಗೋರಿಗಳು ನೆಲಕ್ಕೆ ಕುಸಿದ ಸ್ಥಿತಿಯಲ್ಲಿ ಕಂಡುಬರುತ್ತಿವೆ. ಅರಣ್ಯ ಇಲಾಖೆಯಿಂದ ನೆಡಲಾಗಿರುವ ಅಕೇಶಿಯ ಮರಗಳು ವರ್ಷಗಳಿಂದ ಬೃಹದಾಕಾರವಾಗಿ ಬೆಳೆದು, ಅವುಗಳ ಬೇರುಗಳು ಶಿಲಾಗೋರಿಗಳ ನೆಲೆಯನ್ನು ದುರ್ಬಲಗೊಳಿಸಿರುವುದಲ್ಲದೇ, ನಿಧಿಗಳ್ಳರ ಹಾವಳಿಯಿಂದಲೂ ಈ ಅಪರೂಪದ ಪುರಾತತ್ವ ಸ್ಮಾರಕಗಳು ಹಾನಿಗೊಳಗಾಗಿವೆ ಎನ್ನಲಾಗಿದೆ.

ಇಂತಹ ಅಪೂರ್ವ ಐತಿಹಾಸಿಕ ಪುರಾವೆಗಳನ್ನು ಸರಕಾರ ತಕ್ಷಣ ಸಂರಕ್ಷಿಸಿ, ಮುಂದಿನ ತಲೆಮಾರಿಗೆ ಪರಿಚಯಿಸುವ ಜವಾಬ್ದಾರಿ ವಹಿಸಬೇಕು ಎಂದು ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಶಿಲಾಗೋರಿಗಳನ್ನು ಪುನಃ ಸರಿಯಾಗಿ ಸ್ಥಾಪಿಸಿ, ಸೂಕ್ತ ರಕ್ಷಣಾ ವ್ಯವಸ್ಥೆ, ದಾರಿದೀಪಗಳು, ಮಾಹಿತಿ ಫಲಕಗಳು, ಶಿಲಾಗೋರಿಗಳ ಇತಿಹಾಸ ವಿವರಿಸುವ ಚಿತ್ರಫಲಕಗಳ ಅಳವಡಿಕೆ ಹಾಗೂ ಕಾಂಕ್ರೀಟ್ ರಸ್ತೆ ಮತ್ತು ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬೀಚ್ ಡೆವಲಪ್ಮೆಂಟ್‌ಗೆ ಸರ್ಕಾರ ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಹಿನ್ನಲೆಯಲ್ಲಿ, ನಮ್ಮ ಪೂರ್ವಿಕರ ಜೀವನ ಶೈಲಿ, ಅಂತ್ಯಸOಸ್ಕಾರ ಪದ್ಧತಿಗಳನ್ನು ಪ್ರತಿಬಿಂಬಿಸುವ ಇಂತಹ ಪುರಾತನ ಶಿಲಾಗೋರಿಗಳನ್ನು ಕೂಡ ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಈ ಕುರಿತು ಸಾಮಾಜಿಕ ಕಾರ್ಯಕರ್ತರಾದ ಸರಳಬೆಟ್ಟು ಆದೇಶ್ ಬಿದಿಕಲ್ ಕಟ್ಟೆ, ರಂಜಿತ್ ಕಕ್ಕುಂಜೆ ಸೇರಿದಂತೆ ಹಲವರು ಮಾತನಾಡಿ, ಪ್ರವಾಸೋದ್ಯಮ ಅಭಿವೃದ್ಧಿಯ ಹೊಸ್ತಿಲಿನಲ್ಲಿ ಇರುವ ಈ ಪ್ರದೇಶಕ್ಕೆ ತುರ್ತು ರಕ್ಷಣೆಯ ಅಗತ್ಯವಿದೆ ಎಂದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ನಿವೃತ್ತ ಸಂಶೋಧಕ ಪ್ರೊ. ಟಿ. ಮುರುಗೇಶಿ ಅವರು ತಮ್ಮ ಶಿಷ್ಯ ವೃಂದದೊAದಿಗೆ ಸ್ಥಳೀಯರಿಗೆ ಶಿಲಾಗೋರಿಗಳ ಇತಿಹಾಸ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇವುಗಳು ಪ್ರಾಚೀನ ಕಾಲದಲ್ಲಿ ಮೃತದೇಹಗಳನ್ನು ಆಳವಿಲ್ಲದ ಗುಂಡಿಗಳಲ್ಲಿ ಹೂಳಿ, ಕಾಡುಪ್ರಾಣಿಗಳಿಂದ ರಕ್ಷಿಸಲು ದೊಡ್ಡ ಬಂಡೆಗಲ್ಲುಗಳಿOದ ಮುಚ್ಚುತ್ತಿದ್ದ ಸಮಾಧಿ ಸ್ಥಳಗಳಾಗಿವೆ ಎಂದು ಅವರು ವಿವರಿಸಿದರು. ಕೆಲವೆಡೆ ಮಣಿಗಳಂತಹ ವಸ್ತುಗಳೊಂದಿಗೆ ಹೂಳಲಾಗಿದ್ದ ಪುರಾವೆಗಳು ದೊರೆತಿರುವುದಾಗಿ ತಿಳಿಸಿದರು.

ಪ್ಯಾಲಿಯೋಲಿಥಿಕ್ ಮತ್ತು ನವಶಿಲಾಯುಗ ಕಾಲಘಟ್ಟಗಳ ಅಂತ್ಯಕ್ರಿಯಾ ಪದ್ಧತಿಗಳನ್ನು ಪ್ರತಿಬಿಂಬಿಸುವ ಈ ಶಿಲಾಗೋರಿಗಳು, ಮಾನವನ ಸಾವು, ಸಂಸ್ಕಾರ ಕುರಿತ ಮೊದಲ ನಂಬಿಕೆಗಳ ಸಂಕೇತಗಳಾಗಿವೆ. ಈ ಪ್ರದೇಶದ ಸುತ್ತಮುತ್ತ ಖಾಸಗಿ ಜಾಗಗಳಲ್ಲಿಯೂ ಬಂಡೆಗಳ ಮೇಲೆ ರೇಖಾಚಿತ್ರಗಳು ಕಾಣಸಿಗುತ್ತಿದ್ದು, ಇಡೀ ಪ್ರದೇಶವೇ ಪುರಾತತ್ವ ಮಹತ್ವ ಹೊಂದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಸಂಬOಧಪಟ್ಟ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಶಾಶ್ವತ ರಕ್ಷಣಾ ವ್ಯವಸ್ಥೆ ಕಲ್ಪಿಸುವ ಜೊತೆಗೆ ಸರ್ಕಾರದ ಮಟ್ಟದಲ್ಲಿ ತ್ವರಿತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.






 


Ads on article

Advertise in articles 1

advertising articles 2

Advertise under the article