-->
ಬಾವಿ ಕೊರೆಯುತ್ತಿದ್ದ ವೇಳೆ ಕ್ರೇನ್ ನಿಂದ ಮಣ್ಣುತುಂಬಿದ ಕಬ್ಬಿಣದ ಬಕೆಟ್ ಬಿದ್ದು ಕಾರ್ಮಿಕ ಸಾವು

ಬಾವಿ ಕೊರೆಯುತ್ತಿದ್ದ ವೇಳೆ ಕ್ರೇನ್ ನಿಂದ ಮಣ್ಣುತುಂಬಿದ ಕಬ್ಬಿಣದ ಬಕೆಟ್ ಬಿದ್ದು ಕಾರ್ಮಿಕ ಸಾವು


ಹೊಸ ಬಾವಿ ಕೊರೆಯುವ ಕಾಮಗಾರಿ ನಡೆಸುತ್ತಿದ್ದ ವೇಳೆ ಕ್ರೇನ್ ನಿಂದ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಕಾರ್ಮಿಕನ ತಲೆಗೆ ಬಿದ್ದು ಮೃತಪಟ್ಟ ಘಟನೆ ಉಳ್ಳಾಲದ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕು ಮಲ್ಲಾಪುರ ನಿವಾಸಿ ಶಿವಕುಮಾರ ಜಿ.ಕೆ ( 30) ಮೃತರು ಎಂದು ಗುರುತಿಸಲಾಗಿದೆ

ಉಳ್ಳಾಲ ತಾಲೂಕಿನ ಕುತ್ತಾರುವಿನ ಸಲಾತ್ ನಗರದಲ್ಲಿ ಹೊಸ ಬಾವಿ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಒಟ್ಟು ಆರು ಜನ ಕೂಲಿ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು. ಇವರ ಪೈಕಿ ಶಿವಕುಮಾರ್ ಸೇರಿ ಮೂವರು ಕಾರ್ಮಿಕರು ಮೂವತ್ತು ಅಡಿ ಆಳ ಕೊರೆಯಲಾದ ಬಾವಿಯೊಳಗಡೆ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಕಬ್ಬಿಣದ ಬಕೆಟ್‌ನಲ್ಲಿ ಮಣ್ಣು ಮೇಲಕ್ಕೆತ್ತುತ್ತಿದ್ದ ಸಂದರ್ಭ ಕ್ರೇನ್‌ನ ಕೊಕ್ಕೆಯಿಂದ ಬೇರ್ಪಟ್ಟ ಮಣ್ಣು ತುಂಬಿದ ಬಕೆಟ್ ಶಿವಕುಮಾರ್ ಅವರ ತಲೆ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಶಿವಕುಮಾರ್‌ ಅವರನ್ನು ಮೇಲಕ್ಕೆತ್ತಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾದರೂ ದಾರಿ ಮಧ್ಯೆ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮೃತ ಶಿವಕುಮಾರ್ ವಿವಾಹಿತರಾಗಿದ್ದು ತನ್ನ ಪತ್ನಿ ಮತ್ತು ಮೂರು ವರ್ಷದ ಗಂಡು ಮತ್ತು ಒಂದು ವರ್ಷದ ಹೆಣ್ಣು ಮಗಳೊಂದಿಗೆ ತೊಕ್ಕೊಟ್ಟುವಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

Ads on article

Advertise in articles 1

advertising articles 2

Advertise under the article