ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಹತಾಶ ಆರೋಪಕ್ಕೆ ರಘುಪತಿ ಭಟ್ ಬೇಷರತ್ ಕ್ಷಮೆ ಯಾಚಿಸಲಿ: ದಿನೇಶ್ ಅಮೀನ್
ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ರಾಜಕೀಯ ಹತಾಶೆಯಿಂದ ಮಾಜಿ ಶಾಸಕ ರಘುಪತಿ ಭಟ್ ಮಾಡಿರುವ ಆಧಾರ ರಹಿತ ಆರೋಪವನ್ನು ತಕ್ಷಣ ಹಿಂಪಡೆದು ಬೇಷರತ್ ಕ್ಷಮೆ ಯಾಚಿಸುವಂತೆ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್ ಆಗ್ರಹಿಸಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಬಡಾನಿಡಿಯೂರು ಗ್ರಾಮದಲ್ಲಿ ಮಾಜಿ ಶಾಸಕ ರಘುಪತಿ ಭಟ್ ಒಡೆತನದ ಖಾಸಗಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಸುಳ್ಳು ಮಾಹಿತಿ ನೀಡಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಕೆ ಮಾಡಿರುವ ಬಗ್ಗೆ ಸ್ಥಳೀಯ ಕರಾವಳಿ ಯುವಕ ಮಂಡಲ ಹಾಗೂ ಊರಿನ ಜನತೆಯ ದೂರಿನಂತೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಕಾನೂನು ಪ್ರಕಾರ ಕ್ರಮವಹಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸುವಂತೆ ಪತ್ರ ಬರೆದಿದ್ದರು. ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ 3 ಬಾರಿ ಶಾಸಕರಾಗಿರುವ ರಘುಪತಿ ಭಟ್ ರಾಜಕೀಯ ಪ್ರೇರಿತರಾಗಿ ಸುಳ್ಳು ಆರೋಪಗಳನ್ನು ಮಾಡಿ ತೇಜೋವಧೆಗೆ ಪ್ರಯತ್ನ ಮಾಡುತ್ತಿದ್ದಾರೆ.
ರಘುಪತಿ ಭಟ್ಟರಿಗೆ ಹಿಂದುಳಿದ ವರ್ಗದ ಸಾಮಾನ್ಯ ಕಾರ್ಯಕರ್ತ ರನ್ನು ಶಾಸಕನಾಗಿ ಒಪ್ಪುವ ಮನಸ್ಥಿತಿ ಇಲ್ಲ. ಉಡುಪಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಅನುದಾನಗಳ ಕೊರತೆಯ ನಡುವೆಯೂ ಹಗಲಿರುಳು ಶ್ರಮಿಸುತ್ತಾ, ಪಕ್ಷದ ಕಾರ್ಯಕರ್ತರ ಬೇಡಿಕೆ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಉಡುಪಿ ಕ್ಷೇತ್ರದ ಜನತೆಯ ಘನತೆಗೆ ದಕ್ಕೆಯಾಗದಂತೆ ಓರ್ವ ಜವಾಬ್ದಾರಿಯುತ ಶಾಸಕರಾಗಿ ಯಶ್ ಪಾಲ್ ಸುವರ್ಣ ಕಾರ್ಯ ವೈಖರಿ ಬಗ್ಗೆ ಹೆಮ್ಮೆ ಇದೆ ಎಂದರು.
ಪಕ್ಷದಿಂದ 3 ಬಾರಿ ಶಾಸಕರಾಗಿ ಅಧಿಕಾರ ಅನುಭವಿಸಿ, ಕಳೆದ ಚುನಾವಣೆಯಲ್ಲಿ ಸೀಟು ನೀಡಿಲ್ಲ ಎಂಬ ಏಕೈಕ ಉದ್ದೇಶಕ್ಕಾಗಿ ಅಧಿಕಾರದ ಲಾಲಸೆಯಿಂದ ತನಗಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು ನಡು ನೀರಲ್ಲಿ ಕೈಬಿಟ್ಟು ಪಕ್ಷಕ್ಕೆ ದ್ರೋಹ ಬಗೆದು ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಂಡಾಯವಾಗಿ ಸ್ಪರ್ಧಿಸಿ ಪಕ್ಷಕ್ಕೆ ಗೌರವ ನೀಡದ ರಘುಪತಿ ಭಟ್ ಯಶ್ ಪಾಲ್ ಸುವರ್ಣ ಅವರ ಕಾರ್ಯವೈಖರಿ, ಪಕ್ಷ ನಿಷ್ಠೆ ಹಾಗೂ ಬದ್ಧತೆಯ ಬಗ್ಗೆ ಟೀಕಿಸುವ ನೈತಿಕತೆ ಉಳಿದಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ರಾಜೀವ್ ಕುಲಾಲ್, ಪ್ರಭಾಕರ್ ಪೂಜಾರಿ, ಪ್ರದೀಪ್ , ಶ್ರೀವತ್ಸ ಮೊದಲಾದವರು ಉಪಸ್ಥಿತರಿದ್ದರು.