ಸವಾಲುಗಳನ್ನು ಎದುರಿಸಿ ತುಳುಚಿತ್ರ ಡೈರೆಕ್ಷನ್‌ಗೆ ಮುಂದಾದ ಕುಡ್ಲದ ಕುವರಿ
ಸಿನಿಮಾ “ನಾಯಕಿ” ಎಂದರೆ ಗ್ಲಾಮರ್, ಖ್ಯಾತಿ, ಚಪ್ಪಾಳೆ. ಆದರೆ ಅದರ ಹಿಂದೆ ಇರುವ ಒತ್ತಡ, ಅಸಹನೀಯ ಡಿಮ್ಯಾಂಡ್‌ಗಳು ಮತ್ತು ಸವಾಲುಗಳ ಕಥೆ ಬೇರೆ. ಆ ಸವಾಲುಗಳನ್ನೇ ಅವಕಾಶವನ್ನಾಗಿ ಮಾಡಿಕೊಂಡು ತುಳು ಚಿತ್ರರಂಗದಲ್ಲಿ ನಿರ್ದೇಶನದ ಮೊದಲ ಕ್ಯಾಪ್ ಹಾಕಿದ ಮಹಿಳೆ ಅಶ್ವಿನಿ ಕೋಟ್ಯಾನ್.
ಡಾನ್ಸರ್ ಆಗಿದ್ದ ಅಶ್ವಿನಿ ಅವರ ಸಿನಿ ಪಯಣ ಡ್ಯಾನ್ಸರ್ ಆಗಿ ಆರಂಭವಾಯಿತು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆದ ಹಾಡಿನ ಚಿತ್ರೀಕರಣದಲ್ಲಿ ನಾಲ್ಕು ದಿನ ಭಾಗವಹಿಸಿದ ಅಶ್ವಿನಿ ಅವರಿಗೆ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿತು. “ಕ್ಯಾಮೆರಾ ಹಿಂದೆ ಏನಾಗುತ್ತದೆ?” ಎಂಬ ಪ್ರಶ್ನೆಯೇ ಅವರನ್ನು ಚಿತ್ರರಂಗದತ್ತ ಕರೆದೊಯ್ದಿತು.
ಕಾಲೇಜು ದಿನಗಳಲ್ಲಿ ಸುಧೀರ್ ರಾಜ್ ಅವರ ಡ್ರಾಮಾ ತಂಡ ಸೇರಿಕೊಂಡು ಅನೇಕ ನಾಟಕಗಳಲ್ಲಿ ಅಭಿನಯಿಸಿದ ಅವರು, ರಂಗಭೂಮಿ ಅನುಭವದಿಂದ ಅಭಿನಯದ ಗಟ್ಟಿತನ ಪಡೆದುಕೊಂಡರು. ಬಳಿಕ ‘ಕಾವಳ’ ಆರ್ಟ್ ಫಿಲ್ಮ್ನಲ್ಲಿ ಮುಖ್ಯ ಪಾತ್ರ ಸಿಕ್ಕಿದ್ದು, ತಾಂತ್ರಿಕ ಜ್ಞಾನವನ್ನು ಕಲಿಯುವ ಅವಕಾಶವಾಯಿತು.
ಜಾಹೀರಾತು ಲೋಕದಲ್ಲಿ 200ಕ್ಕೂ ಹೆಚ್ಚು ನಿರ್ದೇಶನ
2011ರಿಂದ ಜಾಹೀರಾತು ಕ್ಷೇತ್ರಕ್ಕೆ ಕಾಲಿಟ್ಟ ಅಶ್ವಿನಿ, ಕ್ರಿಯೇಟಿವ್ ಹಾಗೂ ಕಾನ್ಸೆಪ್ಟ್ ಡೈರೆಕ್ಟರ್ ಆಗಿ 200ಕ್ಕೂ ಹೆಚ್ಚು ಜಾಹೀರಾತುಗಳನ್ನು ನಿರ್ದೇಶಿಸಿದ್ದಾರೆ. ಫೋಟೋಶೂಟ್, ಪ್ರಚಾರ ಚಿತ್ರೀಕರಣ, ಶೆಡ್ಯೂಲ್ ನಿರ್ವಹಣೆ ಎಲ್ಲವೂ ಅವರ ಅನುಭವದ ಪಾಠಶಾಲೆಯಾದವು.
ಕನ್ನಡ ಸಿನಿಮಾದ ಒಂದು ಅವಕಾಶದ ವೇಳೆ, ಅವರ ರೂಪವನ್ನು ವ್ಯಂಗ್ಯ ಮಾಡಿ ಬೇಡಿಕೆ ಇಟ್ಟ ಘಟನೆ ಅವರ ಬದುಕಿನ ತಿರುವು ಬಿಂದು. ನೀವು ಮುಖವನ್ನು ಕನ್ನಡಿಯಲ್ಲಿ ನೋಡಿದ್ದೀರಾಎಂಬ ಮಾತು ಕೇಳಿದಾಗ, ಅವರು ಹತಾಶರಾಗಲಿಲ್ಲ. ಅದನ್ನೇ ಸವಾಲಾಗಿ ಸ್ವೀಕರಿಸಿದರು. ನಾನು ಕಥೆ ಹೇಳುವವರಾಗಬಾರದೇ ಎಂಬ ಪ್ರಶ್ನೆ ಅವರೊಳಗೆ ಮೂಡಿ, ನಿರ್ದೇಶನದತ್ತ ಹೆಜ್ಜೆ ಇಟ್ಟರು.
2016ರಲ್ಲಿ ಅವರು ನಿರ್ದೇಶಿಸಿದ ಸಂಪೂರ್ಣ ತುಳು ಚಿತ್ರ ‘ನಮ್ಮ ಕುಡ್ಲ’ ಬಿಡುಗಡೆಯಾಯಿತು. ಪ್ರಕಾಶ್ ಶೆಟ್ಟಿ ಬರೆದ ಕಥೆಗೆ ಅವರು ಜೀವ ತುಂಬಿದರು. ವಾಣಿಜ್ಯವಾಗಿ ದೊಡ್ಡ ಯಶಸ್ಸು ಸಿಗದಿದ್ದರೂ, ಅದು ಅಶ್ವಿನಿಗೆ ಅಮೂಲ್ಯ ಅನುಭವವಾಯಿತು. “ತುಳು ಇಂಡಸ್ಟ್ರಿ ಕಷ್ಟಕರವಾದರೂ, ಇಲ್ಲಿ ಸಿಗುವ ಜ್ಞಾನ ಅಮೂಲ್ಯ” ಎಂದು ಅವರು ಹೇಳುತ್ತಾರೆ.
50- 60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ‘ತಂಬಿಲ’ ಆರ್ಟ್ ಸಿನಿಮಾ ಬಿಡುಗಡೆಯಾಗದೇ ಹಾಗೇಯೇ ಉಳಿದುಬಿಟ್ಟಿತು, ಇದು ಅವರ ಮನಸ್ಸಿಗೆ ನೋವು ತಂದರೂ ‘ಸೆಂಟ್ರಲ್ ಮಾರ್ಕೆಟ್’ ಹಾಗೂ ‘ರಾಮಕೃಷ್ಣ ಗೋವಿಂದ’ ಎಂಬ ಎರಡು ಸ್ಕ್ರಿಪ್ಟ್ಗಳು ಸಿದ್ಧವಾಗಿವೆ.
2016ರ ನಂತರ ಎರಡು ವರ್ಷಗಳ ನಿರುತ್ಸಾಹದ ಅವಧಿ ಕಂಡರೂ, 2018ರಿಂದ ಮತ್ತೆ ಜಾಹೀರಾತು, ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಹಾಗೂ ಈವೆಂಟ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
“ಪ್ರತಿಯೊಂದು ಅನುಭವವೂ ಪಾಠ. ಮತ್ತೆ ಉತ್ತಮ ಕಥೆಯೊಂದಿಗೆ ಬರುತ್ತೇನೆ,” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಅಶ್ವಿನಿ ಕೋಟ್ಯಾನ್. ತುಳು ಚಿತ್ರರಂಗದಲ್ಲಿ ಮಹಿಳೆಯರಿಗೂ ನಿರ್ದೇಶನದ ದಾರಿ ತೆರೆದ ಅಶ್ವಿನಿ ಕೋಟ್ಯಾನ್ ಅವರು ಎಲ್ಲರ ಮಹಿಳೆಯರಿಗೂ ಸ್ಪೂರ್ತಿಯಾಗಿದ್ದಾರೆ.

.jpeg)
