-->
80 ಬಡಗುಬೆಟ್ಟುವಿನಲ್ಲಿ ಕಂಬಳದ ಹೆಸರಿನಲ್ಲಿ 13 ಎಕ್ರೆ ಜಾಗ ಅತಿಕ್ರಮಣ- ವಿನಯಕುಮಾರ್ ಸೊರಕೆ ಆರೋಪ

80 ಬಡಗುಬೆಟ್ಟುವಿನಲ್ಲಿ ಕಂಬಳದ ಹೆಸರಿನಲ್ಲಿ 13 ಎಕ್ರೆ ಜಾಗ ಅತಿಕ್ರಮಣ- ವಿನಯಕುಮಾರ್ ಸೊರಕೆ ಆರೋಪ


ಉಡುಪಿಯ 80 ಬಡಗುಬೆಟ್ಟುವಿನಲ್ಲಿ ಸುಮಾರು 13 ಎಕರೆ ಜಾಗವನ್ನು ಅತಿಕ್ರಮಣ ಮಾಡಿ ಕಂಬಳಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ. ಅವರ ಅಕ್ರಮಗಳನ್ನು ಮುಚ್ಚಿ ಹಾಕಲು ನನ್ನ ವಿರುದ್ಧ ಅಪವಾದ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.  ಶಾಸಕ ಗುರ್ಮೆ ಸುರೇಶ್ ಶೆಟ್ಟಿಗೆ ಅನುಭವದ ಕೊರತೆ ಇದೆ. ನನ್ನ ವಿರುದ್ಧ ಅಪವಾದ ಹಾಕುವ ನಿರಂತರ ಪ್ರಯತ್ನ ನಡೆಯುತ್ತಿದೆ. ಕಂಬಳ ಜನಪದ ಕ್ರೀಡೆ. ಇದಕ್ಕೆ ನನ್ನ ವಿರೋಧ ಇಲ್ಲ. ಆದರೆ ಬಡಗುಬೆಟ್ಟುವಿನಲ್ಲಿ ಕಂಬಳಕ್ಕೆ ಸೂಚಿಸಿದ್ದ ಜಾಗ ಇನ್ನೂ ಕಂಬಳ ಸಮಿತಿಗೆ ಹಸ್ತಾಂತರ ಆಗಿಲ್ಲ. ಅರಣ್ಯ ಇಲಾಖೆಯ ಜಾಗವನ್ನು ಉಲ್ಲಂಘಿಸಿರುವ ಬಗ್ಗೆಯೂ ಪ್ರಕರಣ ದಾಖಲಾಗಿದೆ. ಕಂಬಳ ನಡೆಸಲು ಅಲ್ಲಿ ಕೆಲವೊಂದು ಷರತುಗಳಿವೆ. ಆದರೆ ಅದನ್ನು ಉಲ್ಲಂಘಿಸಿ 13 ಎಕರೆ ಜಾಗ ಅತಿಕ್ರಮಣ ಮಾಡಿದ್ದಾರೆ. ಆ ಭಾಗದಲ್ಲಿ ಬಹಳ ವರ್ಷದಿಂದ ಇರುವ ರೈತರಿಗೆ ಸರಿಯಾದ ಹಕ್ಕುಪತ್ರ ಸಿಕ್ಕಿಲ್ಲ. 40 ವರ್ಷದಿಂದ ಬಡಗುಬೆಟ್ಟು ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಸರ್ವಾಧಿಕಾರಿ ದೋರಣೆಯಿಂದ ಅತಿಕ್ರಮಣ ಮಾಡುವ ಕೆಲಸವಾಗಿದೆ ಎಂದರು.

ಜಿಲ್ಲಾಡಳಿತದ ಮಟ್ಟದಿಂದ ಕಂಬಳ ಸಮಿತಿ ರಚನೆಯಾಗಿಲ್ಲ. ಜಿಲ್ಲಾಡಳಿತದ ವತಿಯಿಂದ ಜಾಗ ಹಸ್ತಾಂತರ ಆಗಿಲ್ಲ. ಈ ಬಗ್ಗೆ ತಹಶೀಲ್ದಾರ್ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದೇನೆ ಎಂದರು. 

ಜಿಲ್ಲಾಡಳಿತದ ಅನುಮತಿ ಪಡೆದುಕೊಳ್ಳದೇ ಗುದ್ದಲಿ ಪೂಜೆ ನೆರವೇರಿಸಿ ಎಂದು ನಾನೆಲ್ಲೂ ಹೇಳಿಲ್ಲ. ನಿಮ್ಮದೇ ಬಿಜೆಪಿ ಪಕ್ಷದ ಮುಖಂಡರು ಸೇರಿಸಿ ಸಭೆ ನಡೆಸಿ ಎಂದು ನಾನೇನು ಹೇಳಿಲ್ಲ. ನೀವೇ ವಿವಾದ ಎಬ್ಬಿಸಿ ನನ್ನ ಮೇಲೆ ಹಾಕುವುದು ಸರಿಯಲ್ಲ ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಎಲ್ಲವನ್ನೂ ವ್ಯಾಪಾರಿ ದೃಷ್ಟಿಯಿಂದ ನೋಡುವುದನ್ನು ನಿಲ್ಲಿಸಲಿ ಎಂದು ಕಿವಿ ಮಾತು ಹೇಳಿದರು. 

ಬಡಗುಬೆಟ್ಟುವಿನಲ್ಲಿ ಕಂಬಳ ನಡೆಸಲು ಸಮಸ್ಯೆ ಇದೆ ಎಂದು ಜಿಲ್ಲಾಡಳಿತವೇ ರದ್ದುಗೊಳಿಸಿತ್ತು ಎಂದರು. ಕಂಬಳಕ್ಕೆ ನನ್ನ ವಿರೋಧವಿಲ್ಲ. ಆ ಭಾಗದ ಜನರ ಸಮಸ್ಯೆಗಳನ್ನು ಪರಿಹರಿಸಿ, ಸರಿಯಾದ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಕಂಬಳ ಮಾಡಲಿ ಎಂದರು. 

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಂಗ್ರೆಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಸಂತೋಷ್ ಕುಲಾಲ್, ಸಂತೋಷ್ ಕುಮಾರ್ ಭೈರಂಪಳ್ಳಿ ಮತ್ತು ಇಸ್ಮಾಯಿಲ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article