ಪಂಚಗ್ಯಾರಂಟಿಯಿಂದ ಮಹಿಳೆಯರ ಸಬಲೀಕರಣ- ನವೀನ್ ಚಂದ್ರ ಸುವರ್ಣ
Monday, March 16, 2026
ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ವತಿಯಿಂದ ಕಾಪು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಎಸ್ ಸುವರ್ಣ ಇವರು ಪ್ರಸ್ತಾವಿಕವಾಗಿ ಮಾತನಾಡಿ, ರಾಜ್ಯ ಸರಕಾರದ ಪಂಚಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದು, ಇದರಿಂದ ಮಹಿಳೆಯರ ಸಬಲೀಕರಣ ಸಾಧ್ಯವಾಗಿದೆ. ಮಹಿಳೆಯರಿಗೆ ಸರಿಸಮಾನ ಅವಕಾಶ ನೀಡುವಲ್ಲಿ, ಆರ್ಥಿಕ ಶಕ್ತಿಯನ್ನು ಹೆಚ್ಚಿಸುವಲ್ಲಿ ರಾಜ್ಯ ಸರಕಾರವು ಹತ್ತು ಹಲವು ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯು ಯಾವ ರೀತಿಯಲ್ಲಿ ಬಡವರಿಗೆ ಅನುಕೂಲಕರವಾಗಿದೆ ಎಂಬುವುದನ್ನು ವಿವರಿಸಿ, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಇದೊಂದು ಮಹ್ವತದ ಸಾಧನೆಯಾಗಿದೆ. ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿ ಹಾಗೂ ಸದೃಢರಾಗಲು ಕರೆ ನೀಡಿದರು.
ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷವಾಗಿ ಕಾಪು ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರನ್ನು ಆಹ್ವಾನಿಸಿ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ವಿಜಯನಾರಾಯಣ, ತಾಲೂಕಿನ ಅಂಗನವಾಡಿ ಮೇಲ್ವಿಚಾರಕಿಯರು ಹಾಗು ಕಾಪು ತಾಲೂಕು ಪಂಚಾಯತಿನ ಮಹಿಳಾ ಅಧಿಕಾರಿ/ಸಿಬ್ಬಂದಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರಾದ ಪ್ರಭಾಕರ ಆಚಾರ್ಯ ಕಟಪಾಡಿ, ಕೀರ್ತಿ ಕುಮಾರ್, ರೀನಾ ವಿನುತ ಡಿಸೋಜ, ಸವಿತಾ ಕುಂದರ್, ರಾಜೇಶ್ ಮೂಲ್ಯ, ಹಸನಬ್ಬ ಶೇಖ್, ವಿಜಯ್ ಎಸ್, ಲವ ಕರ್ಕೇರ, ಉದಯ ಸಿ ಇವರು ಉಪಸ್ಥಿತರಿದ್ದರು.
ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಇವರು ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯರಾದ ಸುಧೀರ್ ಎಸ್ ಕರ್ಕೇರ ಧನ್ಯವಾದ ಸಮರ್ಪಿಸಿದರು.

