ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ ನಿಧನಕ್ಕೆ ಡಾ. ತಲ್ಲೂರು ಸಂತಾಪ
ಯಕ್ಷಗಾನ ರಂಗದ ದಶಾವತಾರಿ, ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ (88) ನಿಧನಕ್ಕೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ತಲ್ಲೂರು ಹಾಗೂ ಅಕಾಡೆಮಿಯ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸೂರಿಕುಮೇರು ಗೋವಿಂದ ಭಟ್ ಯಕ್ಷಗಾನದಿಂದ ನಿವೃತ್ತಿಯಾದ ಬಳಿಕ ತೀರ್ಥಹಳ್ಳಿ ಮತ್ತು ಬಿ.ಸಿ.ರೋಡಿನ ಅಜ್ಜಿಬೆಟ್ಟಿನಲ್ಲಿರುವ ಪುತ್ರರ ಮನೆಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಗೋವಿಂದ ಭಟ್ಟರು ಕೆಲವು ಸಮಯಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಹಿರಿಯ ಪುತ್ರನ ಮನೆಯಲ್ಲಿ ಶುಕ್ರವಾರ ರಾತ್ರಿ 9.10ರ ವೇಳೆ ವಿಧಿವಶರಾಗಿದ್ದಾರೆ. ಸೂರಿಕುಮೇರು ಗೋವಿಂದ ಭಟ್ ಯಕ್ಷಗಾನ ರಂಗದಲ್ಲಿ ಮೂಲ್ಕಿ, ಕೂಡ್ಲು, ಸುರತ್ಕಲ್, ಇರಾ ಮೇಳಗಳಲ್ಲಿ ಕೆಲಸ ಮಾಡಿದ ಬಳಿಕ ದೀರ್ಘಾವಧಿ ಕಾಲ (55 ವರ್ಷ) ಧರ್ಮಸ್ಥಳ ಮೇಳದಲ್ಲಿ ವೃತ್ತಿ ಬದುಕು ನಿರ್ವಹಿಸಿದ ಅವರು ಮೂವರು ಪುತ್ರರು ಹಾಗೂ ಕುಟುಂಬ ವರ್ಗದವರು, ಯಕ್ಷಾಭಿಮಾನಿಗಳ ಅಗಲಿದ್ದಾರೆ. ಗೋವಿಂದ ಭಟ್ಟರ ಪತ್ನಿ ಸಾವಿತ್ರಿ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಿದ್ದರು.
ಸಹಕಲಾವಿದರಿಂದ ಗುರು ಗೋವಿಂದ ಭಟ್ಟರು ಎನಿಸಿಕೊಂಡ ಅವರು, ಆರಂಭದಲ್ಲಿ ಸ್ತ್ರೀ ಪಾತ್ರ ನಿರ್ವಹಿಸಿಯೂ ಸೈ ಎನಿಸಿಕೊಂಡರು. ಬಳಿಕ ವೈವಿಧ್ಯಮಯ ಪಾತ್ರ ನಿರ್ವಹಣೆ ಮೂಲಕ ಯಾವ ವೇಷಕ್ಕೂ ಸೈ ಎಂದು ಮೇಳಕ್ಕೆ ಅನಿವಾರ್ಯರಾದರು. ಅವರ ಕೌರವ ಪಾತ್ರಕ್ಕೆ ತನ್ನದೇ ಆದ ವಿಶೇಷತೆಯಿದೆ. ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಹೆಗ್ಗಡೆ, ಗಣಮಣಿ, ಈಶ್ವರ, ಶ್ರಿ?ದೇವಿ ಮಹಾತ್ಮೆಯ ರಕ್ತಬೀಜ, ಶ್ರೀದೇವಿ ಸಹಿತ ದೇವೇಂದ್ರ, ಕೌರವ, ಶತ್ರುಘ್ನ, ಕೀಚಕ, ದಕ್ಷ , ಮಾಗಧ, ಶಿಶುಪಾಲ ಪಾತ್ರ ಅವಿಸ್ಮರಣೀಯ.
ಸೂರಿಕುಮೇರು ಗೋವಿಂದ ಭಟ್ ನಿಧನದಿಂದ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ ಕುಟುಂಬ ಬಳಗದವರಿಗೆ ನೀಡಲೆಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ.ತಲ್ಲೂರು ಶಿವರಾಮ ಶೆಟ್ಟಿಯವರು ಸಂತಾಪ ಸೂಚಿಸಿದ್ದಾರೆ.