ಕುಡಿಯುವ ನೀರಿಗಾಗಿ ಕೊರೆದ ಬೋರ್‌ವೆಲ್‌ನಿಂದಾಗಿ ಮನೆಯ ಗೋಡೆ ಬಿರುಕು
ಕುಂದಾಪುರದ ತ್ರಾಸಿ ಗ್ರಾಮದ ಮೊವಾಡಿ ಅಂಬೇಡ್ಕರ್ ಕಾಲೋನಿಯಲ್ಲಿ ಹೊಸದಾಗಿ ನಿರ್ಮಿಸಿ ಕೆಲವೇ ದಿನಗಳ ಹಿಂದೆ ಗೃಹಪ್ರವೇಶ ನಡೆದ ಮನೆಯ ಸಮೀಪ ದಲ್ಲೇ ಬೋರ್‌ವೆಲ್ ತೋಡಿದ ಪರಿಣಾಮ ಪರಿಶಿಷ್ಟ ಜಾತಿ ಸಮುದಾಯದ ನಿವಾಸಿಯೊಬ್ಬರ ಹೊಸ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೀಗಾಗಿ ಮನೆಯವರು ಸಂಬOಧಪಟ್ಟ ಇಲಾಖೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಮೊವಾಡಿ ಅಂಬೇಡ್ಕರ್ ಕಾಲೋನಿ ನಿವಾಸಿ ಆಶಾ ನಾಗರಾಜ ಎಂಬುವರು ಇತ್ತೀಚೆಗೆ ಹೊಸ ಮನೆಯೊಂದನ್ನು ಕಟ್ಟಿದ್ದರು. ಇದೇ ಮನೆಯಿಂದ ಸ್ವಲ್ಪ ದೂರದಲ್ಲಿ ಸರಕಾರಿ ಸ್ಥಳದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ ಬೋರ್ವೆಲ್ ತೋಡಲಾಗುತ್ತಿದ್ದು, ಇದರಿಂದ ಮನೆಯ ಗೋಡೆ ಮತ್ತಿತರ ಸ್ಥಳಗಳಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಯಾರ ಗಮನಕ್ಕೂ ತಾರದೇ ಹೊಸ ಮನೆಯ ಸಮೀಪದಲ್ಲೇ ಬೋರ್ವೆಲ್ ತೋಡುತ್ತಿರುವುದರಿಂದ ಇತ್ತೀಚಿಗಷ್ಟೇ ನಿರ್ಮಾಣವಾಗಿರುವ ಹೊಸ ಮನೆಯ ಅಲ್ಲಲ್ಲಿ ಬಿರುಕು ಕಾಣಿಸಿಕೊಂಡಿರು ವುದು ಸ್ಥಳೀಯರ ಆಕ್ರೋಶಕ್ಕೂ ಕಾರಣವಾಯಿತು.
ನಾಗರಾಜ್ ಮತ್ತು ಆಶಾ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದು, ಮಕ್ಕಳು ಶಾಲೆಗೆ ಹೋಗಿದ್ದರು. ಬೋರ್ವೆಲ್ ತೆಗೆಯಲು ಆರಂಭಿಸಿದ ಸಮಯದಲ್ಲಿ ಯಾರೂ ಇರಲಿಲ್ಲ. ನಾಗರಾಜ್ ಮತ್ತು ಆಶಾ ಕೆಲಸದಿಂದ ಮನೆಗೆ ಬಂದಾಗ ಬೋರ್ವೆಲ್ ತೋಡುತ್ತಿರುವುದು ಮತ್ತು ಇದರಿಂದ ಮನೆಯ ಮೇಲೆ ಆದ ಪರಿಣಾಮಗಳನ್ನು ಗಮನಿಸಿ, ಸ್ಥಳೀಯ ಗ್ರಾಪಂಗೆ ವಿಷಯ ತಿಳಿಸಿ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಕೂಡಲೇ ಬೋರ್ವೆಲ್ ತೋಡುವುದನ್ನು ನಿಲ್ಲಿಸಬೇಕು, ಸಂಬAದಪಟ್ಟ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬೋರ್ವೆಲ್ ತೋಡಿರುವುದರಿಂದ ಆದ ಹಾನಿಯನ್ನು ಪರಿಶೀಲಿಸಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದ ನಾಗರಾಜ್, ಬೋರ್ವೆಲ್ ತೆಗೆಯುವ ಸಂದರ್ಭ ಸಮೀಪದಲ್ಲಿರುವ ಮನೆಯನ್ನು ಗಮನಿಸದೆ, ಒಂದು ವಾರದ ಹಿಂದಷ್ಟೇ ಗೃಹ ಪ್ರವೇಶ ಆದ ಮನೆಯಲ್ಲಿ ಬಿರುಕು ಮೂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಹೊಣೆಗಾರರು ಯಾರು? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಜಿಪಂ ಎಇಇ ನಾಗಶಯನ, ಗ್ರಾಪಂ ಪ್ರಭಾರ ಪಿಡಿಒ ಶೋಭಾ, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಪವನ್ ನಾಯಕ್ ಮೊದಲಾದವರು ಹಾನಿಯನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಮನೆಯವರ ಮನವೊಲಿಸುವ ಪ್ರಯತ್ನ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಜಿಲ್ಲಾಧಿಕಾರಿಗಳು ಅಥವಾ ಜಿಪಂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವ ತನಕ ಯಾವುದೇ ರಾಜಿ ಮಾಡಿ ಕೊಳ್ಳುವುದಿಲ್ಲ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸುವುದಾಗಿ ಆಶಾ ನಾಗರಾಜ್ ಹೇಳಿದರು.
ಈ ಸಂಬOಧ ಜಿಪಂ ಎಇಇ ನಾಗಶಯನ, ಗ್ರಾಪಂ ಪ್ರಭಾರ ಪಿಡಿಒ ಶೋಭಾ, ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಸೈ ಪವನ್ ನಾಯಕ್ ಅವರು ಆಶಾ ಮತ್ತು ನಾಗರಾಜ್ ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಬುಧವಾರ ಸಂಬOಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದರು.