ಮೂಡಬಿದ್ರೆ ಠಾಣೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ; ತನಿಖೆಗೆ ಆದೇಶ
ಮೂಡಬಿದಿರೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದಕ್ಕೆ ಸಂಬOಧಿಸಿ ಬಂಧಿತ ಆರೋಪಿಯ ಪತ್ನಿಯು ಠಾಣೆಯ ಇನ್ ಸ್ಪೆಕ್ಟರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಉತ್ತರ ಉಪವಿಭಾಗ (ಪಣಂಬೂರು)ದ ಎಸಿಪಿಗೆ ಸೂಚಿಸಿದ್ದಾರೆ.
ಹಣ ಲಪಟಾಯಿಸಿರುವ ಕುರಿತು ವ್ಯಕ್ತಿಯೊಬ್ಬನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ನಿನ್ನ ಪತಿಯನ್ನು ಬಿಡುಗಡೆಗೊಳಿಸುತ್ತೇನೆ ಹಾಗೂ 25 ಲಕ್ಷ ರೂ. ನೀಡದಿದ್ದರೆ ಪತಿಯ ವಿರುದ್ಧ ರೌಡಿಶೀಟ್ ತೆರೆಯುವುದಾಗಿ ಮೂಡುಬಿದಿರೆ ಠಾಣೆಯ ಇನ್ ಸ್ಪೆಕ್ಟರ್ ಸಂದೇಶ್ ಬಿ.ಜಿ. ಬೆದರಿಕೆ ಒಡ್ಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಇದನ್ನು ಗಮನಿಸಿದ ರಾಜ್ಯ ಮಹಿಳಾ ಆಯೋಗವು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಯಾವುದೇ ಮಹಿಳೆ ತನಗೆ ದೂರು ನೀಡಿಲ್ಲ. ಯಾರೊಬ್ಬ ಸಂತ್ರಸ್ತ ದೂರು ನೀಡಿದರೂ ಆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ನಿರೀಕ್ಷಕರ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಪಣಂಬೂರು ಎಸಿಪಿ ಶ್ರೀಕಾಂತ್ ಅವರಿಗೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಮೂಡುಬಿದಿರೆ ಪೊಲೀಸ್ ನಿರೀಕ್ಷಕರ ವಿರುದ್ಧ ಆರೋಪ ಮಾಡಿರುವ ಮಹಿಳೆ ಹಾಗೂ ಆಕೆಯ ಸಹೋದರಿ ನಡುವೆ ಮನಸ್ತಾಪವಿದೆ. ಈ ಪ್ರಕರಣದಲ್ಲಿ ಪೊಲೀಸ್ ನಿರೀಕ್ಷಕರು ಪಕ್ಷಪಾತ ಎಸಗಿ ಆಕೆಯ ಸಹೋದರಿ ಪರ ನಿಂತಿದ್ದರು ಎಂದು ದೂರುದಾರ ಮಹಿಳೆ ಆರೋಪಿಸಿದ್ದರು. ಇದರ ವಿಚಾರಣೆ ನ್ಯಾಯಾಲಯದಲ್ಲಿದೆ. ಈ ಪ್ರಕರಣಕ್ಕೆ ಸಂಬOಧಿಸಿ ಪೊಲೀಸ್ ನಿರೀಕ್ಷಕರು ಕಾನೂನು ಬದ್ಧವಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರ ವಿರುದ್ಧ ಕ್ರಮ ಕೈಗೊಂಡಿರುವುದಿಲ್ಲ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
ತನ್ನನ್ನು ಭೇಟಿಯಾದ ಮಹಿಳೆಯು ಪೊಲೀಸ್ ನಿರೀಕ್ಷಕರು ತಡೆಗೋಡೆ ಹಾರಿರುವ ವೀಡಿಯೊ ಒಂದನ್ನು ತೋರಿಸಿದ್ದರು. ಆದರೆ, ಆ ಮನೆಯ ಮಾಲಕರು ದೂರು ನೀಡದ ಹೊರತು ಈ ಬಗ್ಗೆ ಕ್ರಮ ವಹಿಸಲು ಸಾಧ್ಯವಿಲ್ಲ. ಮಹಿಳೆ ಯಾವುದೇ ಆಡಿಯೊ ದಾಖಲೆಗಳನ್ನು ನೀಡಿಲ್ಲ ಎಂದು ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.