-->
ಮೌಢ್ಯ ಬಿತ್ತುವ "ಸಮಾಧಾನ ಮಹೋತ್ಸವ"ಕ್ಕೆ ಅವಕಾಶ ನೀಡಿದರೆ ಉಗ್ರ ಹೋರಾಟ- ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ

ಮೌಢ್ಯ ಬಿತ್ತುವ "ಸಮಾಧಾನ ಮಹೋತ್ಸವ"ಕ್ಕೆ ಅವಕಾಶ ನೀಡಿದರೆ ಉಗ್ರ ಹೋರಾಟ- ಶ್ರೀಕಾಂತ್ ಶೆಟ್ಟಿ ಎಚ್ಚರಿಕೆ


ಉಡುಪಿ ನಗರದ ಮಿಷನ್ ಕಾಂಪೌಂಡ್ ಪರಿಸರದಲ್ಲಿ ಮಾರ್ಚ್ 20, 21 ಮತ್ತು 22ರಂದು ತಮಿಳುನಾಡಿನ ವಿವಾದಾತ್ಮಕ ಮಿಷನರಿ ಮೋಹನ್ ಸಿ. ಲಾಝರಸ್ ನೇತೃತ್ವದಲ್ಲಿ ಆಯೋಜಿಸಲಾಗಿರುವ ಸಮಾಧಾನ ಮಹೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಅವಕಾಶ ನೀಡಬಾರದು ಎಂದು ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಆಗ್ರಹಿಸಿದರು. 

ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ಮೋಹನ್ ಸಿ. ಲಾಝರಸ್ ಅವರು ಈ ಹಿಂದೆ ಹಿಂದೂ ದೇವಾಲಯಗಳನ್ನು “ಸೈತಾನನ ನೆಲೆಗಳು” ಎಂದು ಹೇಳುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ ಅವರು, ಈ ಸಂಬಂಧ ತಮಿಳುನಾಡಿನ ಹಲವು ಪೊಲೀಸ್ ಠಾಣೆಗಳಲ್ಲಿ ಐಪಿಸಿ ಸೆಕ್ಷನ್ 153A ಮತ್ತು 295A ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು. ಲಾಝರಸ್ ಅವರ ‘ಜೀಸಸ್ ರಿಡೀಮ್ಸ್’ ಸಂಸ್ಥೆಯು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ ಉಲ್ಲಂಘಿಸಿ ವಿದೇಶಿ ಹಣವನ್ನು ಕೋಮು ಸೌಹಾರ್ದತೆಗೆ ಧಕ್ಕೆ ತರುವ ಚಟುವಟಿಕೆಗಳಿಗೆ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 2024ರ ಮಾರ್ಚ್‌ನಲ್ಲಿ ಸಂಸ್ಥೆಯ ಪರವಾನಗಿಯನ್ನು ಅಮಾನತುಗೊಳಿಸಿದೆ ಎಂಬುದನ್ನೂ ಅವರು ಉಲ್ಲೇಖಿಸಿದರು. 

ಸಮಾಧಾನ ಮಹೋತ್ಸವದ ಹೆಸರಿನಲ್ಲಿ ಬಲಾತ್ಕಾರವಾಗಿ ಮತಾಂತರ ಮಾಡುವ ಷಡ್ಯಂತ್ರ ಇದಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಲಾಗಿದೆ. ಬಹಿರಂಗವಾಗಿ ಮೌಢ್ಯ ಬಿತ್ತುವ ಕೆಲಸಗಳಿಗೆ ಅವಕಾಶ ಬಿಡಬಾರದು. ಜಿಲ್ಲೆಯಲ್ಲಿ ಶಾಂತಿ ನೆಮ್ಮದಿಗೆ ಭಂಗ ತರುವ ಕೆಲಸವನ್ನು ಸಂಘಟಕರು ಬಿಡಬೇಕು.ಜಿಲ್ಲೆಯ ಸಂಸ್ಕೃತಿ, ಸಭ್ಯತೆಗೆ ಭಂಗ ತರುವ ಕೆಲಸಕ್ಕೆ ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಅವಕಾಶ ಕೊಡಬಾರದು. ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. 

ಸುದ್ದಿಗೋಷ್ಟಿಯಲ್ಲಿ ವಿಜಯ್ ಕೊಡ್ವೂರು, ರತ್ನಾಕರ ಅಮೀನ್, ಗುರುಪ್ರಸಾದ್ ನಾರಾವಿ, ರಾಜೇಶ್ ಉಚ್ಚಿಲ ಮೊದಲಾದವರು ಇದ್ದರು. 


Ads on article

Advertise in articles 1

advertising articles 2

Advertise under the article