ತುಳುವಿನಲ್ಲಿ ಕಾರ್ಯಕ್ರಮ ಮಾಡಿದರೆ ಸಾಲದು, ತುಳುವಿನ ಬಗ್ಗೆ ಅಧ್ಯಯನ ಮಾಡಬೇಕು: ಡಾ.ಧನಂಜಯ್ ಕುಂಬ್ಳೆ
ತುಳುವಿನಲ್ಲಿ ಕಾರ್ಯಕ್ರಮ ಮಾಡಿ ಸಂಭ್ರಮಿಸಿದರೆ ಸಾಲದು ತುಳುವಿನ ಬಗ್ಗೆ ಅಧ್ಯಯನ ಮಾಡಬೇಕು ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ತಿಳಿಸಿದರು.
ಅವರು ತುಳುಕೂಟ ಉಡುಪಿ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಡಾ.ಜಿ.ಶಂಕರ್ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಉಡುಪಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ, ಕರ್ನಾಟಕ ಸರಕಾರದ ಜಂಟಿ ಆಶ್ರಯದಲ್ಲಿ ಅಜ್ಜರಕಾಡಿನ ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತುಳುಮಿನದನ -2026 ಇದರ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ನಮ್ಮ ಕರಾವಳಿಯಲ್ಲಿ ಹಲವು ಭಾಷೆಗಳಿವೆ. ಕನ್ನಡ ನಮ್ಮ ಆಡಳಿತ ಭಾಷೆ ಆದರೂ ಕೂಡಾ ತುಳು ಬಾಸೆಗೇ ತನ್ನದೇ ಆದ ಪ್ರಾಧಾನ್ಯತೆ ಇದೆ. ತುಳುನಾಡಿನ ಚರಿತ್ರೆಯ ಪ್ರಕಾರ ನಮ್ಮ ನಾಡನ್ನು ಹಿಂದಿನ ಕಾಲದಲ್ಲಿ ಆಳಿದವರು ಕನ್ನಡದವರು. ಹಾಗಾಗಿ ತುಳು ಬಾಸೆಗೆ ಆಡಳಿತದ ಘನತೆ ಸಿಗಲಿಲ್ಲ.ತುಳು ಬಾಸೆಗೆ ಬಹಳ ದೊಡ್ಡ ಜನಪದ ಸಂಸ್ಕೃತಿ ಇದೆ. ತುಳುನಾಡಿನ ಪಾಡ್ದನ, ಒಗಟುಗಳು, ಗಾದೆಗಳು, ಕಥೆಗಳು , ಇಂತಹ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಅಗತ್ಯ ಇದೆ. ಆ ನಿಟ್ಟಿನಲ್ಲಿ ತುಳುವಿಗೆ ಸಂಶೋಧನ ಕೇಂದ್ರದ ಅಗತ್ಯ ತೆ ಇದೆ. ಸರಕಾರ ಇದನ್ನು ಆದಷ್ಟು ಬೇಗ ಮಾಡಿಕೊಡಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ತುಳುಕೂಟ ಉಡುಪಿಯ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅತ್ಲೆಟಿಕ್ ಅಸೋಸಿಯೇಶನ್ಸ್ ನ ಅಧ್ಯಕ್ಷ ಹರಿಪ್ರಸಾದ್ ರೈ ತುಳುಮಿನದನ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಮಾಜ ಸೇವಕರಾದ ವಿದ್ಯಾ ಲತಾ ಶೆಟ್ಟಿ, ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಪೂಜಾರಿ ಬನ್ನಂಜೆ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಚಾರ್ಯರಾದ ಸೋಜನ್ ಕೆ.ಜಿ. ಇವರು ತನ್ನ ಮಾತೃಭಾಷೆ ಮಲಯಾಳಿ ಆದರೂ ವೇದಿಕೆಯಲ್ಲಿ ತುಳುವಿನಲ್ಲಿ ಯೇ ಮಾತನಾಡಿ ಎಲ್ಲರ ಗಮನ ಸೆಳೆದರು.
ಸಭಾ ಕಾರ್ಯಕ್ರಮದ ಕೊನೆಗೆ ತುಳು ಪೀಠದ ಸಹಾಯಕರಾದ ಪ್ರಸಾದ್ ಅಂಚನ್ ಧನ್ಯವಾದ ಸಮರ್ಪಿಸಿದರು. ಪೂರ್ವಿಕ ನಿರೂಪಿಸಿದರು.ಸಭಾಕಾರ್ಯಕ್ರಮದ ನಂತರ ತುಳು ಮಿನದನದ ವಿವಿಧ ಸ್ಪರ್ಧೆಗಳು ನಡೆಯಿತು. ಸಮಾರೋಪದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು,ತುಳುಮಿನದ ಸಂಚಾಲಕ ದಯಾನಂದ ಡಿ., ವಿ.ಕೆ.ಯಾದವ್, ಪ್ರಭಾಕರ ಭಂಡಾರಿ, ಸರೋಜ ಯಶ್ವಂತ್, ಪ್ರಭಾವತಿ, ಕೋಶಾಧಿಕಾರಿ ಚೈತನ್ಯ ಎಮ್.ಜಿ. ಉಪಸ್ಥಿತರಿದ್ದರು.
