-->
1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ

1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ


ರಾಜ್ಯದ ಶಾಲಾ ಶಿಕ್ಷಣ ಇಲಾಖೆಯು ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದಂತೆ ಇದ್ದ ವಯೋಮಿತಿ ವಿಚಾರಕ್ಕೆ ಇದೀಗ ರಾಜ್ಯ ಸರಕಾರ ಗುಡ್ ನ್ಯೂಸ್ ಕೊಟ್ಟಿದ್ದು, ವಯೋಮಿತಿಯಲ್ಲಿ 60 ದಿನಗಳ ಕಾಲ ಸಡಿಲಿಕೆ ನೀಡಿ ಇಂದು ಅಧಿಕೃತ ಆದೇಶ ಹೊರಡಿಸಿದೆ. 

2026-27ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ, ಶೈಕ್ಷಣಿಕ ವರ್ಷದ ಜೂನ್‌ 1 ರಿಂದ ಗರಿಷ್ಠ60 ದಿನಗಳ ಸಡಿಲಿಕೆಯನ್ನು ನೀಡಿ ಮಗುವಿನ ವಯಸ್ಸನ್ನು ಲೆಕ್ಕಹಾಕಿ ಶಾಲಾ ದಾಖಲಾತಿಗೆ ಪರಿಗಣಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕಳೆದ ಕೆಲವು ತಿಂಗಳುಗಳಿಂದ ಒಂದನೇ ತರಗತಿಗೆ ಮಕ್ಕಳು ಸೇರಿಸುವ ಕುರಿತಂತೆ ವಯೋಮಿತಿ ಸಡಿಲಿಕೆ ಮಾಡಬೇಕೆಂದು ಪೋಷಕರು ಒತ್ತಾಯ ಮಾಡಿದ್ದರು. ಅಲ್ಲದೆ ಸರಕಾರಕ್ಕೆ  ಮನವಿಗಳನ್ನು ಸಲ್ಲಿಸಿದ್ದರು. ಇದೀಗ  ಮನವಿಗಳನ್ನು  ಪುರಸ್ಕರಿಸಿರುವ ಸರ್ಕಾರ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರ ಅಡಿಯಲ್ಲಿ ತನಗಿರುವ ವಿಶೇಷ ಅಧಿಕಾರವನ್ನು ಬಳಸಿ ಈ ವಿನಾಯಿತಿ ಘೋಷಿಸಿದೆ.

ಹೊಸ ಆದೇಶದನ್ವಯ, 2026-27ನೇ ಶೈಕ್ಷಣಿಕ ಸಾಲಿಗೆ ಸೀಮಿತವಾಗಿ ಒಂದನೇ ತರಗತಿಗೆ ಮಕ್ಕಳನ್ನು ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ, ಶೈಕ್ಷಣಿಕ ವರ್ಷದ ಜೂನ್ 1 ರಿಂದ ಗರಿಷ್ಠ 60 ದಿನಗಳ ಸಡಿಲಿಕೆಯನ್ನು ನೀಡಲಾಗಿದೆ. ಅಂದರೆ, ಮಗುವಿನ ಜನ್ಮದಿನವು ಜೂನ್ 1 ರಿಂದ ಜುಲೈ 30ರ ಒಳಗಿದ್ದರೆ ಅಂತಹ ಮಕ್ಕಳನ್ನು 1ನೇ ತರಗತಿಗೆ ದಾಖಲಿಸಿಕೊಳ್ಳಲು ಯಾವುದೇ ಅಡೆತಡೆ ಇರುವುದಿಲ್ಲ. ಈ ಸಡಿಲಿಕೆಯ ಫಲವಾಗಿ 5 ವರ್ಷ 10 ತಿಂಗಳು ಪೂರ್ಣಗೊಂಡ ಮಕ್ಕಳಿಗೂ ಸಹ ಪ್ರಸಕ್ತ ಸಾಲಿನಲ್ಲಿಯೇ ಶಾಲೆಗೆ ಸೇರಲು ಕಾನೂನಾತ್ಮಕ ಅವಕಾಶ ಲಭ್ಯವಾಗಿದೆ.

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಈ ಹಿಂದೆ ನೀಡಿದ್ದ ಭರವಸೆಯಂತೆ ಹೊರಬಿದ್ದಿರುವ ಈ ಆದೇಶವು ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲದೆ, ರಾಜ್ಯದಾದ್ಯಂತ ಇರುವ ಅನುದಾನಿತ ಹಾಗೂ ಖಾಸಗಿ (ಸಿಬಿಎಸ್‌ಇ ಮತ್ತು ಐಸಿಎಸ್‌ಇ ಸೇರಿದಂತೆ) ಎಲ್ಲಾ ಶಾಲೆಗಳಿಗೂ ಕಡ್ಡಾಯವಾಗಿ ಅನ್ವಯವಾಗಲಿದೆ. ಅಲ್ಲದೆ, ದಾಖಲಾತಿ ಪ್ರಕ್ರಿಯೆಯಲ್ಲಿ ತಾಂತ್ರಿಕ ತೊಂದರೆ ತಪ್ಪಿಸಲು ‘ಸ್ಯಾಟ್ಸ್’ (SATS) ತಂತ್ರಾಂಶದಲ್ಲಿ ತಕ್ಷಣವೇ ಅಗತ್ಯ ಬದಲಾವಣೆ ತರುವಂತೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವಿಶೇಷ ವಿನಾಯಿತಿಯಿಂದಾಗಿ ರಾಜ್ಯದ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಅನುಕೂಲವಾಗಲಿದ್ದು, ಆರ್‌ಟಿಇ (RTE) ಅಡಿಯಲ್ಲಿ ಸೀಟು ಬಯಸುವ ಪೋಷಕರಿಗೂ ಇದು ವರದಾನವಾಗಲಿದೆ.


Ads on article

Advertise in articles 1

advertising articles 2

Advertise under the article