-->
ಬೇಸಿಗೆ ರಜೆಗೆ ಪುಟಾಣಿಗಳ ಕೂಲ್ ಕೂಲ್ ಬಿಸಿನೆಸ್..!

ಬೇಸಿಗೆ ರಜೆಗೆ ಪುಟಾಣಿಗಳ ಕೂಲ್ ಕೂಲ್ ಬಿಸಿನೆಸ್..!



ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಆಟ, ಮೋಜು ಮತ್ತು ಹೊಸದನ್ನು ಕಲಿಯುವ ಸಮಯ. ಆದರೆ ಉಡುಪಿಯಲ್ಲಿ ಈ ಮೂವರು ಮಕ್ಕಳು ರಜೆಯನ್ನು ಮಜಾ ಮಾಡುವುದಕ್ಕಷ್ಟೇ ವಿನಿಯೋಗಿಸಿಲ್ಲ. ರಜೆಯ ಮೋಜಿನ ಜೊತೆಗೂಡಿಸಿ ಪುಟ್ಟದೊಂದು ಜ್ಯೂಸ್ ಕೌಂಟರ್ ತೆರೆದು ಪುಟಾಣಿಗಳು ಗ್ರಾಹಕರನ್ನು ಆಕರ್ಷಿಸಿದ್ದಾರೆ. ಈ ಮೂಲಕ ಜೀವನದ ಅಮೂಲ್ಯ ಪಾಠಗಳನ್ನು ಕಲಿಯುತ್ತಿದ್ದಾರೆ.


ಉಡುಪಿಯ ಸೋಜಾ ಕ್ಯಾಷ್ಯೂ ಶಾಪ್ ಎದುರು ಈ ಪುಟ್ಟ ಅಂಗಡಿ ತೆರೆದುಕೊಂಡಿದೆ. ಸೋಜಾ ಕ್ಯಾಶ್ಯೂ ಮಾಲಕಿ ಬೆಟ್ಟಿನಾ ಅವರ ಮಕ್ಕಳು ಹಾಗೂ ಸ್ನೇಹಿತೆಯ ಮಗಳು ಸೇರಿ ಮೂವರು ಮಕ್ಕಳು ತಮ್ಮ ಮುಗ್ದ ನಗುವಿನಿಂದಲೇ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ವಿದ್ಯೋದಯ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸ್ಮಿರ ಜ್ಯೂಸ್ ತಯಾರಿಸುತ್ತಿದ್ದರೆ, ಪಕ್ಕದಲ್ಲಿ ನಿಂತಿದ್ದ ಪುಟಾಣಿ ಝಾಕ್ ಹಾಗೂ ಝೂಇ ಗ್ರಾಹಕರನ್ನು ಕರೆದು ಮೆನ್ ಕಾರ್ಡ್ ನೀಡುವುದರಲ್ಲಿ ತಲ್ಲೀನರಾಗಿದ್ದರು.


ಅಂದ ಹಾಗೆ ಈ ಮೂವರು ಮಕ್ಕಳು ಕರಾಟೆ ತರಗತಿಯ ಸ್ನೇಹಿತರು. ರಜೆಯಲ್ಲಿ ಒಟ್ಟಿಗೆ ಕೂಡಿ ಪಾನೀಯಗಳನ್ನು ಮಾರಾಟ ಮಾಡಬೇಕು ಎಂದು ನಿರ್ಧರಿಸಿದರು. ಲೆಮನ್ ಜ್ಯೂಸ್, ಜಿಂಜರ್ ಲೈಮ್, ಕೊಕಮ್, ಗ್ರೇಪ್ ಜ್ಯೂಸ್ ಮುಂತಾದ ತಂಪು ಪಾನೀಯಗಳನ್ನು ಆಯ್ಕೆ ಮಾಡಿಕೊಂಡರು. ನಂತರ ಬೇಕಾದ ಸಾಮಗ್ರಿಗಳನ್ನು ಪಟ್ಟಿಮಾಡಿ, ತಮ್ಮ ಪೋಷಕರ ಸಹಾಯದಿಂದ ಅದನ್ನೆಲ್ಲಾ ಖರೀದಿಸಿದರು.ಮಕ್ಕಳೇ ಸೇರಿ ಮೆನು ಕಾರ್ಡ್ ತಯಾರಿಸಿ, ಇಂತಿಷ್ಟು ದರ ನಿಗದಿ ಮಾಡಿ ಏ.9ರಂದು ಶುಭಾರಂಭಗೊಳಿಸಿದರು. ಜ್ಯೂಸ್ ಕೌಂಟರ್ ಆರಂಭದ ದಿನವೇ ಅತೀ ಹೆಚ್ಚು ಗ್ರಾಹಕರನ್ನು ತಮ್ಮತ್ತ ಆಕರ್ಷಿಸಿದ್ದು, ಒಂದು ಸಾವಿರ ರೂಪಾಯಿಯ ವ್ಯಾಪಾರ ಕುದುರಿಸಿದ್ದಾರೆ. ಇವರ ಮುಗ್ದ ನಗು ಮತ್ತು ಆತ್ಮೀಯ ಸ್ವಾಗತ ಗ್ರಾಹಕರ ಮನ ಗೆಲ್ಲುತ್ತಿದೆ.

ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಈ ಜ್ಯೂಸ್ ಕೌಂಟರ್ ತೆರೆದಿರುತ್ತದೆ. ಉಳಿದ ಅರ್ಧ ದಿನದಲ್ಲಿ ಆಟ ಪಾಠದಲ್ಲಿ ಈ ಮಕ್ಕಳು ತೊಡಗಿಕೊಳ್ಳುತ್ತಾರೆ. ಪ್ರತಿ ದಿನ ಟಿವಿ ಮೊಬೈಲ್ ನಲ್ಲೇ ಸಮಯ ವ್ಯರ್ಥ ಮಾಡುವ ಬದಲು ಈ ಮಕ್ಕಳು ಬದುಕಿನ ಸವಾಲುಗಳನ್ನು ಹೇಗೆ ಸಮರ್ಥವಾಗಿ ಎದುರಿಸಬಹುದು ಎನ್ನುವುದನ್ನು ಅರಿತುಕೊಳ್ಳುತ್ತಿದ್ದಾರೆ.


ಈ ಪುಟ್ಟ ಮಕ್ಕಳ ಪ್ರಯತ್ನಕ್ಕೆ ಪೋಷಕರು ಬೆಂಬಲವಾಗಿದ್ದಾರೆ. ಅಷ್ಟೇ ಅಲ್ಲ “ಜ್ಯೂಸ್ ಟ್ರೈ ಮಾಡ್ತೀರಾ…?” ಎನ್ನುವ ಮಕ್ಕಳ ಮುಗ್ಧತೆಗೆ ಗ್ರಾಹಕರು ಕೂಡ ಜ್ಯೂಸ್ ಖರೀದಿಸುವ ಮೂಲಕ ಪ್ರೋತ್ಸಾಹಿಸುತ್ತಾರೆ. ಇದು ಮಕ್ಕಳ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ಜ್ಯೂಸ್ ಹೇಗಿತ್ತು ಅನ್ನೋ ಮಕ್ಕಳ ಮಾತಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದು ಮಕ್ಕಲು ಇನ್ನಷ್ಟು ತಮ್ಮ ಕೆಲಸದಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುತ್ತದೆ ಎನ್ನುತ್ತಾರೆ ಮಕ್ಕಳ ಪೋಷಕರು.

ಈ ಪುಟ್ಟ ಪ್ರಯತ್ನದಿಂದ ಮಕ್ಕಳು ಕೇವಲ ಹಣ ಗಳಿಸುವುದಷ್ಟೇ ಅಲ್ಲ, ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕು, ಪರಿಶ್ರಮದ ಮಹತ್ವ ಮತ್ತು ಹಣದ ಮೌಲ್ಯವನ್ನು ಕೂಡ ಕಲಿಯುತ್ತಿದ್ದಾರೆ. ಪೋಷಕರ ಬೆಂಬಲ ಮತ್ತು ಗ್ರಾಹಕರ ಪ್ರೋತ್ಸಾಹ ಇವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದು ಇತರ ಮಕ್ಕಳಿಗೂ ಪ್ರೇರಣೆಯಾಗಿದೆ.

Ads on article

Advertise in articles 1

advertising articles 2

Advertise under the article