“ಕ್ಲೀನ್ ಇಂದ್ರಾಣಿ “ಗಾಗಿ ಡ್ರೋಣ್ ಮೂಲಕ ಸರ್ವೇ ಕಾರ್ಯ: ಡಿಸಿ ಸ್ವರೂಪ
ಉಡುಪಿಯ ಇಂದ್ರಾಣಿ ನದಿ ನೀರು ಕಲುಷಿತಗೊಂಡಿರುವುದರಿಂದ “ಕ್ಲೀನ್ ಇಂದ್ರಾಣಿ” ಮಾಡುವ ಉದ್ದೇಶದಿಂದ ಡ್ರೋಣ್ ಮೂಲಕ ಸರ್ವೆ ನಡೆಸಲು ಸೂಚಿಸಿರುವುದಾಗಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರು ತಿಳಿಸಿದರು.
ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆದ ಮುಂಗಾರು ಮುಂಜಾಗ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಸೇರುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ನದಿಗೆ ತ್ಯಾಜ್ಯ ನೀರು ಸೇರುವ ಪ್ರದೇಶವನ್ನು ಗುರುತಿಸುವುದಕ್ಕಾಗಿ ಡ್ರೋಣ್ ಸರ್ವೆ ಮಾಡಲು ಸೂಚಿಸಲಾಗಿದೆ ಎಂದರು.
ಇಂದ್ರಾಣಿ ನದಿ ಭಾಗದಲ್ಲೇ ಮನೆ ಮಾಡಿ:
ಉಡುಪಿ ನಗರಸಭೆಯ ಅನುಮತಿ ಪಡೆದು ಕಾಪು ಭಾಗದಿಂದ ತ್ಯಾಜ್ಯಗಳನ್ನು ಸುರಿಯಲಾಗುತ್ತಿದ್ದು, ಈ ಬಗ್ಗೆ ನಗರಸಭೆಯಲ್ಲಿ ನಿರ್ಣಯ ಆಗಿದ್ದರೂ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ನಗರಸಭೆ ಮಾಜಿ ಸದಸ್ಯರು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ಆ ಭಾಗದ ಜನ ಸೊಳ್ಳೆ ಕಾಟ ಹಾಗೂ ನಾನಾ ಕಾಯಿಲೆ ಭೀತಿಯಿಂದ ಬದುಕುತ್ತಿದ್ದಾರೆ. ನಗರ ಪ್ರದೇಶದ ಜನರಿಗೆ ಇದರಿಂದ ಸಮಸ್ಯೆಯಾಗುತ್ತಿದ್ದು, ಸ್ವತಃ ನೀವೇ ಅಲ್ಲಿ ಮನೆ ಮಾಡಿ ಕುಳಿತುಕೊಳ್ಳಿ. ಆಗ ಜನರ ಕಷ್ಟ ಅರ್ಥವಾಗಲಿದೆ ಎಂದು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಮಳೆಗಾಲದಲ್ಲಿ ನೆರೆ ಭೀತಿ:
ಉಡುಪಿ ನಗರಸಭೆ ವ್ಯಾಪ್ತಿಯ ಕಲ್ಮಾಡಿ, ಇಂದ್ರಾಳಿ ನದಿಗಳಲ್ಲಿ ಹೂಳೆತ್ತುವ ಕಾರ್ಯ ಆಗಿಲ್ಲ. ಅಲ್ಲದೇ ಬನ್ನಂಜೆ ವಾರ್ಡ್ ನ ತಗ್ಗುಪ್ರದೇಶದಲ್ಲಿ ಪ್ರತೀ ವರ್ಷ ನೆರೆ ಭೀತಿ ಎದುರಾಗುತ್ತಿದೆ. ನದಿಯಲ್ಲಿ ಮರಳು ಹಾಗು ಹೂಳು ತುಂಬಿಕೊಂಡಿದ್ದು, ಈ ಬಾರಿ ಮಳೆಗಾಲದಲ್ಲಿ ನೆರೆ ಭೀತಿ ಎದುರಾಗಲಿದೆ ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೌರಾಯುಕ್ತರು, ಪೌರ ಕಾರ್ಮಿಕರಿಂದ ಕೆಲಸ ಮಾಡಿಸುತ್ತಿದ್ದು, ಇನ್ನು 50 ಜನ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬಗ್ಗೆ ಟೆಂಡರ್ ಕರೆಯಲಾಗಿದೆ. 15 ದಿನಗಳಲ್ಲಿ ಲಭ್ಯವಾಗಲಿದ್ದಾರೆ. ಈಗ ಪ್ರತಿ ವಾರ್ಡ್ ಗೆ ಎರಡರಿಂದ ಮೂರು ಜನ ಕಾರ್ಮಿಕರು ಬರುತ್ತಿದ್ದಾರೆ ಕಾರ್ಮಿಕರ ಕೊರತೆ ಇರುವುದರಿಂದ ಮರ ಕಡಿಯುವ ಕಾರ್ಮಿಕ ರ ಕೊರತೆ ಇದೆ ಎಂದರು.
ಸುಂದರ ಕಲ್ಮಾಡಿ ಅವರು ಮಾತನಾಡಿ, ನಗರಸಭೆಯಲ್ಲಿ ಕಾರ್ಮಿಕರ ಕೊರತೆಯಿಂದ ಮಳೆ ಬರುವವರೆಗೂ ಕೆಲಸ ಆಗುವುದಿಲ್ಲ. ಹಾಗಾಗಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನೇಮಿಸಿ ಕೆಲಸ ಮಾಡಿಸಿ ಎಂದು ಸಲಹೆ ನೀಡಿದರು.
ವರಾಹಿ ನದಿ ನೀರಿನ ಪೈಪ್ಲೈನ್ ಲೀಕೇಜ್:
ಉಡುಪಿ ನಗರಕ್ಕೆ ಕುಡಿಯುವ ನೀರಿನ ಯೋಜನೆಯಾದ ವರಾಹಿ ಯೋಜನೆಯ ಪೈಪ್ ಲೈನ್ ಒಡೆದು ನೀರು ಪೋಲಾಗುತ್ತಿದೆ . ಈ ಬಗ್ಗೆ ದೂರುಗಳು ಬಂದಿದ್ದು,ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ನಗರಸಭೆ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



