-->
ಎ.10-12: ಉಡುಪಿ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ

ಎ.10-12: ಉಡುಪಿ ವೈಕುಂಠ ಬಾಳಿಗಾ ಲಾ ಕಾಲೇಜಿನಲ್ಲಿ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆ


ಉಡುಪಿಯ ವೈಕುಂಠ ಬಾಳಿಗ ಕಾನೂನು ಮಹಾವಿದ್ಯಾಲಯದಲ್ಲಿ ಪ್ರತಿಷ್ಠಿತ ಅಡ್ವೋಕೇಟ್ ಪಿ. ಶಿವಾಜಿ ಶೆಟ್ಟಿ ಸ್ಮಾರಕ 10ನೇ ರಾಷ್ಟ್ರೀಯ ಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಎ.10 ರಿಂದ 12ರವರೆಗೆ ಆಯೋಜಿಸಲಾಗುತ್ತಿದೆ ಎಂದು ಪ್ರಾಂಶುಪಾಲೆ ಪ್ರೊ. ಸುರೇಖಾ ಕೆ. ತಿಳಿಸಿದ್ದಾರೆ. 

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಎ. 10ರ ಮಧಾಹ್ನ 2.30 ಕ್ಕೆ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯವರ್ತಿಗಳಾದ ಎಂ.ಜಿ.ಉಮಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಅಲೈಯನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಪ್ರೊ. (ಡಾ.) ಪ್ರಕಾಶ್ ಕಣಿವೆ, ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನದ ಮುಖ್ಯಸ್ಥರಾದ ಟಿ. ಅಶೋಕ ಪೈ ಹಾಗೂ ದಿವಂಗತ ಪಿ. ಶಿವಾಜಿ ಶೆಟ್ಟಿಯವರ ಧರ್ಮಪತ್ನಿ ಜಯಂತಿ ಪಿ. ಶಿವಾಜಿ ಶೆಟ್ಟಿಯವರು ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದರು.

ಎ. 12 ರಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಂಡಿದ್ದು, ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಮತ್ತು ದೆಹಲಿಯ ಆದಾಯ ತೆರಿಗೆ ನ್ಯಾಯ ಮಂಡಳಿಯ ನ್ಯಾಯಿಕ ಸದಸ್ಯರಾದ ಯೊಗೇಶ್ ಕುಮಾರ್ ಯು.ಎಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ನಿರ್ದೇಶಕ ಪ್ರೊ.(ಡಾ.) ಚಿದಾನಂದ ರೆಡ್ಡಿ ಎಸ್. ಪಾಟೀಲ್‌ ರವರು ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ದೇಶದ ವಿವಿಧ ರಾಜ್ಯಗಳ ಕಾನೂನು ಕಾಲೇಜುಗಳ 28 ತಂಡಗಳು ಭಾಗವಹಿಸುತ್ತಿವೆ. ಈ ಸ್ಪರ್ಧೆಯಲ್ಲಿ ಕಾನೂನು ರಸಪ್ರಶ್ನೆ ಸ್ಪರ್ಧೆ ಹಾಗೂ ತೀರ್ಪು ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಎಪ್ರಿಲ್ 20 ಮತ್ತು 21 ರಂದು "ಪುನಶ್ಚೇತನ್ಯಕಾರಿ ನ್ಯಾಯ ಸುಸ್ಥಿರತೆ ಮತ್ತು ಹವಾಮಾನ ಕ್ರಮ" ಎಂಬ ವಿಷಯದ ಮೇಲೆ ಎರಡು ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣವನ್ನು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್, ಮಣಿಪಾಲದ ಸ್ಕೂಲ್ ಅಫ್ ಆರ್ಕಿಟೆಕ್ಟ್ ಆ್ಯಂಡ್ ಪ್ಲಾನಿಂಗ್, ಮಾಹೆ ಹಾಗೂ ಮೈಸೂರಿನ ಜೆ.ಎಸ್.ಎಸ್ ಕಾನೂನು ಕಾಲೇಜಿನ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ. ನ್ಯಾಷನಲ್ ಲಾ ಸ್ಕೂಲ್‌ನ ಪ್ರೊ.(ಡಾ.) ಸಾಯಿರಾಮ್ ಭಟ್ ಉದ್ಘಾಟಿಸಲಿದ್ದಾರೆ. ಕೀನ್ಯಾ ಸ್ಕೂಲ್ ಆಫ್ ಲಾ ಪ್ರಾಧ್ಯಾಪಕರಾದ ಪ್ರೊ.ಜ್ಯಾಕಲಿನ್ ಮೆಹೇನ್ನಾರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದಾರೆ ಎಂದರು. 

ಮೇ 9 ರಿಂದ 15 ರ ವರೆಗೆ ಗೋಳಿಯಂಗಡಿಯಲ್ಲಿ ವಾರ್ಷಿಕ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು ಸ್ವಚ್ಛತೆ, ಕಾನೂ ಅರಿವು ಮತ್ತು ನೆರವು ಹಾಗೂ ಇತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮೇ 26 ರಂದು ಡಾ.ಟಿ.ಎಂ.ಎ.ಪೈ. ಉಪನ್ಯಾಸವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನ ನಿವೃತ್ತ ಪ್ರಾಧ್ಯಾಪಕರಾದ ಎಂ ನಾಗರಾಜ್‌ರವರು ಉಪನ್ಯಾಸ ನೀಡಲಿದ್ದಾರೆ ಎಂದರು. 

ಸುದ್ದಿಗೋಷ್ಟಿಯಲ್ಲಿ ಮೂಟ್ ಕೋರ್ಟ್ ಸೊಸೈಟಿಯ ಕೋ ಆರ್ಡಿನೇಟರ್ ಡಾ. ಶ್ರೀನಿವಾಸ ಪ್ರಸಾದ್, ಡಾ. ಪ್ರೀತಿ ಹರೀಶ್ ರಾಜ್, ಜಯಂತಿ ಪಿ. ಶಿವಾಜಿ ಶೆಟ್ಟಿ,  ಡಾ. ಜಯಮೋಲ್ ಪಿ.ಎಸ್, ಈರಪ್ಪ ಎಸ್ ಮೇದರ್, ಅಮೋಘ ಗಡ್ಕರ್ ಮೊದಲಾದವರು ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article